1.

ಹುಟ್ಟು ಸಾವುಗಳೇನಲ್ಲ ಮುಟ್ಟು
ರತ್ನಗಂಬಳಿಯದು ಬಡವಗೆ ಗೋಣಿತಟ್ಟು
ಸತ್ತದೇಹಕಿರದಾ ಮುಕ್ತಿಯಾಗದ ದಿಕ್ಕು
ಎಂಥ ಘೋರವದು ಕರೋನ ಟೆಕ್ನಿಕ್ಕು!
                                                     - ಎಮ್ಮೆಚ್ಚೆ

ವಿಸ್ತೃತ 
    ಜೀವಿಗಳಿಗೆಲ್ಲ ಹುಟ್ಟು ಸಾವುಗಳು ಜೀವಿತದೊಂದು ಭಾಗಗಳು .ಆದರೂ ಎಷ್ಟೋ ಜನರು ಹುಟ್ಟು ಸಾವುಗಳು ಕೆಟ್ಟದ್ದು ಹಾಗೂ ಮುಟ್ಟಿಸಿಕೊಳ್ಳಲಾರದ್ದೆಂದು ಭಲವಾಗಿ ನಂಬಿದ್ದಾರೆ. ಮತ್ತು ಗೋಣಿತಟ್ಟುಗಳನ್ನೇ ಜೊತೆಯಾಗಿಸಿದ್ದಾರೆ. ಜನರುಹಿಂದಿನಕಾಲದಿಂದಲೂ  ಇವುಗಳಿಗೆ ವಿಶಿಷ್ಠ ಪದ್ದತಿಗಳನ್ನು ತಮಗೆ ತಿಳಿತಿಳಿದಂತೆ ಆಚರಿಸುತ್ತ ಬಂದಿದ್ದಾರೆ.ಆದರೆ ಎಲ್ಲರೂ ಇವುಗಳನ್ನು ಮಡಿವಂತಿಕೆ, ಸ್ವಚ್ಛತನದಿಂದ ನೋಡುವದಕ್ಕೂ ಹೆಚ್ಚು ಮೈಲಿಗೆ ಎಂಬ ವಿಷಯದತ್ತಲೇ ಹೆಚ್ಚು ಗಮನಕೊಡುತ್ತಾರೆ. ಇಲ್ಲ ಸಲ್ಲದ ಗೊಡ್ಡು ಸಂಪ್ರದಾಯಗಳನ್ನೂ ಆಚರಿಸುತ್ತ ಬಂದಿದ್ದಾರೆ. ಆದರೆ ವೈಜ್ಞಾನಿಕತೆ ಪ್ರಕಾರ ಇವುಗಳು ಕೇವಲ ಪ್ರಕ್ರಿಯೆಗಳಷ್ಟೇ ಮತ್ತೇನಲ್ಲ. ಕೆಲವು ದೇಶಗಳಲ್ಲಿ ಹೆರಿಗೆಯಾಗಿ ಕೆಲವೇ ಘಂಟೆಗಳಲ್ಲಿ ಕರ್ತವ್ಯಕ್ಕೆ ಹಾಜರಾಗುವದನ್ನು ಕೇಳಿದ್ದೇವೆ, ಮತ್ತು ಅದು ದೈಹಿಕ ಕ್ಷಮತೆಗೆ ಸಂಬಂಧಪಟ್ಟದ್ದೆಂದು ಸಾಬೀತುಪಡಿಸಿದ್ದಾರೆ.
     ಶ್ರೀಮಂತರಿಗೆ ಶಾಲು, ರಗ್ಗು, ರತ್ನಗಂಬಳಿ ಮುಂತಾದ ವಿಶಿಷ್ಟರೀತಿಯ ವೈಭೋಗದೈಸಿರಿಗಳೆಲ್ಲ ಇವೆ ಆದರೆ ನಿದ್ರೆಮಾತ್ರ ಸಿಗುತ್ತಿಲ್ಲ. ನಿದ್ದೆಗೆ ಬೇಕಾಗಿರುವದು ದೇಹದ ದನಿವು ಹಾಗೂ ತೃಪ್ತಿಕರ ಬದುಕು ಮಾತ್ರ. ಅದಕ್ಕೇ ದೈಹಿಕ ಶ್ರಮದಾನ ಮಾಡಿದ ಹಾಗೂ ಮಾನಸಿಕ ನೆಮ್ಮದಿ ಕದಡುವ ಯಾವ ವಿಷಯಗಳೂ ಇಲ್ಲದ್ದಕ್ಕೆ ಬಡತನಕೊಲಿದ ಹರಕು ಗೋಣಿತಟ್ಟುಗಳೇ ಬಡವರಿಗೆ ವಿಶಿಷ್ಟ ರೀತಿಯ ರತ್ನಗಂಬಳಿಗಳ ಕೆಲಸ ಮಾಡುತ್ತದೆ.
   ಸಧ್ಯದ ಪರೀಸ್ಥಿತಿಗಳಲ್ಲಿ ನಾನಾ ತರಹದ ಅಂಟು ಜಾಡ್ಯಗಳಿಂದಾಗಿ ಸಾಮಾಜಿಕ ಅಂತರ,ಸ್ವಚ್ಛತೆ ಕಾಪಾಡಿಕೊಳ್ಳುವದು ಬಹಳ ಮುಖ್ಯವಾಗಿರುತ್ತದೆ. ಆದರೆ ನಮ್ಮ ದೇಶದ ಬಡ ಜನತೆಗೆ ಅಷ್ಟು ಸರಳಸಾಧ್ಯತೆ ಇಲ್ಲ ಆದರೂ ಪಾಲಿಸಬೇಕಾದ ಅನಿವಾರ್ಯತೆ ಇದೆ . ಕೆಲ ದೇಶಗಳಲ್ಲಿ ಕರೋನ ರೋಗದಿಂದ ಸಾವುಗಳ ಸಂಖೆ ಅಧಿಕವಾಗಿ, ಶವಗಳಿಗೆ ಅಂತಿಮ ಕ್ರಿಯಾಸಂಸ್ಕಾರಗಳನ್ನೂ ಮಾಡದಷ್ಟು ಪರಸ್ಥಿತಿ ಬಿಗಡಾಯಿಸಿದೆ. ಶವಗಳನ್ನು ಸಮುದ್ರಕ್ಕೆ ಎಸೆಯುತ್ತಿದ್ದುದು ದೊಡ್ಡ  ದುರಂತಗಳಲ್ಲೊಂದು. ಈ ಕರೋನ ಮಾರಿಯ ನಿಖರತೆ, ಹಾಗೂ ಮದ್ದು ಸಿಗದ್ದಕ್ಕೆ ಜನರಲ್ಲಿ ಭಾರೀ ಭಯಾನಕತೆಯೂಂಟುಮಾಡಿದೆ. ಎಲ್ಲರೂ ಎಚ್ಚೆತ್ತುಕೊಳ್ಳದಿದ್ದಲ್ಲಿ ಮನುಕುಲ ನಾಶಹೊಂದುವುದರಲ್ಲಿ ಯಾವುದೇ ಅತಿಶಯವಿಲ್ಲ.

2.


ಆಹಾರದಲತೀ ಕಲಬೆರಕೆ 
ತಿಂದು ಬದುಕಬೇಕೆಂದರಾಕಾಲ, 
ವಿಷದಲೂ ಅತೀ ಕಲಬೆರಕೆ 
ನೊಂದು ಸಾಯಬೇಕೆಂದರೀಕಾಲ! 
                                                - ಎಮ್ಮೆಚ್ಚೆ 

ವಿಸ್ತೃತ 
ನಾವು ಚಿಕ್ಕವರಿದ್ದಾಗ ಜನರ ಆಸೆ ಆಕಾಂಕ್ಷೆಗಳು ಅಲ್ಪವಾಗಿದ್ದವು ಮತ್ತು ಸಾತ್ವಿಕವಾಗಿದ್ದವು ಅಂತಲೇ ಅವರು ಶತಾಯುಷಿಗಳಾಗುತ್ತಿದ್ದರು. ಅವರು ಉಪಯೋಗಿಸುವ ಪ್ರತಿಯೊಂದು ವಸ್ತುಗಳು ಸಾಧ್ಯವಾದಷ್ಟು ಶುಧ್ಧವಾಗಿ ಇರುತ್ತಿದ್ದವು. ಬರಬರುತ್ತಾ ಕಾಲಗತಿಸಿದಂತೆಲ್ಲ ಒಂದೊಂದೇ ವಸ್ತುಗಳಲ್ಲಿ ಮಿಶ್ರ ಕ್ರಿಯೆ ಪ್ರಾರಂಭವಾಯಿತು. ಅಂದರೆ ಆ ವಸ್ತುವಿನಂತೆಯೇ ಬಿಂಬಿಸುವ ಹಾಗು ಕಡಿಮೆ ದರದ್ದಾಗಿರುವ ಬೇರೆ ವಸ್ತುಗಳನ್ನು ಮಿಶ್ರ ಮಾಡಿ ಮೋಸದಿಂದ ಲಾಭ ಮಾಡಿಕೊಳ್ಳುವಿಕೆ ಹೆಚ್ಚಾಗತೊಡಗಿತು. ಇದು ಮುಂದುವರಿಯುತ್ತಾ ಹೋಗಿ ದಿನಂಪ್ರತಿ ಉಪಯೋಗಿಸುವ ಜೀವನಾವಶ್ಯಕ ಪ್ರತಿ ವಸ್ತುಗಳಲ್ಲೂ ಮಿಶ್ರ ಮಾಡುವ ಕಲಬೆರಕೆ ಯುಗ ಪ್ರಾರಂಭವಾಯಿತು. ಇದು ಮಾನವ ಜನಾಂಗ ಮತ್ತು ಪರಿಸರದ ಮೇಲೆ ಅಧಿಕವಾದ ದುಷ್ಪರಿಣಾಮವನ್ನು ಬೀರಿತು. ಸಾಕಷ್ಟು ದೈಹಿಕ ಮತ್ತು ಮಾನಸಿಕ ನೂನ್ಯತೆಗಳುಂಟಾದವು. ಆದರೂ ಸಹ ಯಾವ ರೀತಿಯಿಂದಲೂ ಈ ಕಲಬೆರಕೆ ತನವನ್ನು ನಿರ್ಮೂಲನೆ ಮಾಡುವುದು ಸಾಧ್ಯವಾಗಲಿಲ್ಲ. ಈಗ ಎಲ್ಲೋ ಒಬ್ಬ ಶತಾಯುಷಿಗಳನ್ನು ನೋಡುವಂತಾಗಿದೆ. ಮಾನವರ ಸರಾಸರಿ ಆಯುಷ್ಯ ಕುಸಿಯುತ್ತಲೇ ಹೋಗುತ್ತಿದೆ. ಚಿಕ್ಕ ಪುಟ್ಟ ಕಾಯಿಲೆಗಳನ್ನೂ ತಡೆದುಕೊಳ್ಳಲಾರದಷ್ಟು ಶಕ್ತಿ ಹೀನರಾಗಿದ್ದೇವೆ. ಕಲಬೆರಕೆಯ ಆಹಾರ ಒಂದೆಡೆಯಾದರೆ ವಿಷಯುಕ್ತ ಆಹಾರ ಇನ್ನೊಂದೆಡೆ. ಆಧುನಿಕತೆ ಪ್ರಗತಿಯ ನೆಪದಲ್ಲಿ ಗ್ರಾಮ ಕೈಗಾರಿಕೆಗಳನ್ನು ಮೂಲೆಗುಂಪಾಗಿಸಿ ಮಹಾತ್ಮ ಗಾಂಧೀಜಿಯವರ ಕನಸನ್ನು ಮಣ್ಣುಗೂಡಿಸಿದ್ದೇವೆ. ಇದರ ನಿಮಿತ್ಯವಾಗಿ ಹೊಸತರಹದ ರೋಗಗಳೇ ಮನುಕುಲವನ್ನು ಆಳುತ್ತಿವೆ. ಯಾವ ಮದ್ದುಗಳೂ ನಾಟುತ್ತಿಲ್ಲ. ಇದು ಮನುಕುಲ ನಾಶದ ಅಂತಿಮ ಘಟ್ಟ ಎಂದರೂ ತಪ್ಪಾಗಲಿಕಿಲ್ಲ. ಇದೆಲ್ಲ ಇರಲಿ ಬೆಳೆಗಳಿಗೆ ಅಂಟಿದ ರೋಗ ಕಳೆಯಬೇಕೆಂದು ಯಾವುದೋ ಹೊಸತರದ ಕ್ರಿಮಿನಾಶಕಗಳನ್ನು ಸಿಂಪಡಿಸಿದರೂ ಕ್ರಿಮಿಗಳ ಕಾಟ ತಪ್ಪಲಿಲ್ಲ. ಯಾಕೆಂದು ವಿಚಾರಿಸಿದರೆ ಕ್ರಿಮಿನಾಶಕದ್ಲಲೂ ಕಲಬೆರಕೆ ಸೇರಿಕೊಂಡುದು ಎಂತಹ ದುರಂತ. 

3.

ಕಾಣಲಿಲ್ಲ ನಮಗಾಗ ಜಗವದೆಂತ ಸಮಯ 
ಜನ ಕುತೂಹಲದಿ ನೋಡುತ್ತಿತ್ತು ಪ್ರೀತಿಪರಿಯ, 
ಜಗದ ಸೂಜಿಗವನೀಗ ನಾ ನೋಡುತ್ತಿರುವೆ 
ಜನರಾರಿಗಿಲ್ಲ ನಮ್ಮಯ ಪರಿವೆ!
                                                - ಎಮ್ಮೆಚ್ಚೆ 

ವಿಸ್ತೃತ 
ಮೀಸೆಬಂದವಗೆ ದೇಶ ಕಾಣಲಿಲ್ಲ, ಮೊಲೆ ಬಂದವಳಿಗೆ ನೆಲ ಕಾಣಲಿಲ್ಲವೆಂಬ ಗಾದೆಯಂತೆ ಯವ್ವನಕ್ಕೆ ಕಾಲಿಡುತ್ತಿದ್ದಂತೆ ಎಲ್ಲರಿಗೂ ದೈಹಿಕ ಬದಲಾವಣೆಗಳ ಜೊತೆಗೆ ಮಾನಸಿಕ ಬದಲಾವಣೆಗಳೂ ಜರಗುತ್ತವೆ. ಯವ್ವನ್ದಲ್ಲಿ ಏನನ್ನಾದರೂ ಸಲೀಸಾಗಿ ಸಾಧಿಸಬಲ್ಲೆನೆಂಬ ಛಲ ಅಧಿಕವಾಗಿರುತ್ತದೆ. ಅಂಥಹ ಸಮಯದಲ್ಲಿ ಹಿರಿಯರ ಅನುಭವಿಕ ಹಿತನುಡಿಗಳು ಸರಿ ಕಾಣುವದಿಲ್ಲ. ಹಿರಿಯರಿಗೂ ಇಂತಹವರ ಮೇಲೆ ನಂಬಿಕೆ ಕೊರತೆ ಹಾಗು ಅವಘಡಗಳ ಅನುಭವದಿಂದ ಸಂಶಯಾತ್ಮಕವಾಗಿರುತ್ತಾರೆ. ಎಲ್ಲರ ಗಮನಗಳೂ ಇಂಥ ಯುವ ಜೋಡಿಗಳತ್ತ ಅಧಿಕವಾಗಿರುತ್ತದೆ! ಒಂದೊಮ್ಮೆ ಇಂತಹ ಜೋಡಿಗಳು ಚನ್ನಾಗಿ ಸಂಸಾರ ಬಾಳ್ವೆ ಸಾಗಿಸುತ್ತಾರೆಂದು ಕಂಡುಬಂದಹಾಗೆಲ್ಲ ತಮ್ಮ ಕುತೂಹಲದಿಂದ ಹಿರಿಯರು ಮುಕ್ತರಾಗುತ್ತಾ ಬರುತ್ತಾರೆ. ಆ ಯುವ ಜೋಡಿಗಳು ತಮ್ಮನ್ನು ಹಿರಿಯರು ಸಂಶಯಿಸಿದರಲ್ಲ, ನಾವು ಚನ್ನಾಗಿ ಬಾಳ್ವೆ ಮಾಡಬೇಕೆಂದರೆ ಆ ಸಮಯದಲ್ಲಿ ಇವರ ಬಗ್ಗೆ ಯಾವುದೇ ಗಮನವೇ ಇರುವದಿಲ್ಲ. ಎಲ್ಲಿ ಕುತೂಹಲ ಇರುತ್ತದೆಯೋ ಅಲ್ಲಿ ಎಲ್ಲರ ಗಮನವಿರುತ್ತದೆಯೇ ಹೊರತು ನೈಜತೆ ಇದ್ದ ಕಡೆ ಎಲ್ಲವೂ ನೈಜವಾಗಿಯೇ ಇರುತ್ತದೆ. 

Comments

Popular Posts