1.

ಬದುಕಿಗೊದಗದ ಪ್ರೀತಿ ಎಷ್ಟಿದ್ದರೇನು?
ಬಾಳಿಗೊದಗದ ತಾವು ಏನಿದ್ದರೇನು?
ಶಯನಕಾಗದ ಮಡದಿ ತವರಲಿದ್ದರೇನು?
ಬಡತನಕೊದಗದ ಹಣ ಬ್ಯಾಂಕಲಿದ್ದರೇನು?
                                                                  - ಎಮ್ಮೆಚ್ಚೆ 

ವಿಸ್ತೃತ
ಕಾಣದ ಅಗೋಚರ ಪ್ರೀತಿಗಿಂತ ನಮ್ಮ ಜೀವನದಲ್ಲಿ ಹಾಸಹೊಕ್ಕಾಗಿರುವವರ ಪ್ರೀತಿ ಬಲು ಮುಖ್ಯವಾಗಿರುತ್ತದೆ. ಈ ಪ್ರೀತಿಯ ಅಂತಿಮತೆಯ ಉದ್ದೇಶವೇ ಚನ್ನಾಗಿ ಬದುಕುವದಾಗಿರುತ್ತದೆ. ಅದೇ ತೆರನಾಗಿ ನಮ್ಮ ಬಾಳಿನಲ್ಲಿ ಏನೇನೂ ಉಪಯೋಗಕ್ಕೆ ಬಾರದ ಅನುಕೂಲಗಳನ್ನು ಎಷ್ಟು ಒದಗಿಸಿದರೂ ಉಪಯೋಗ ಆಗುವುದೇ ಇಲ್ಲ. ಹೆಣ್ಣು ಗಂಡುಗಳು ಸಂಸಾರಿಗಳಾಗುವದು ಕೌಟುಂಬಿಕ ನಿರ್ಬಂಧನಗೊಳಪಟ್ಟು ಬಾಳ್ವೆ ಮಾಡುವುದಕ್ಕಾಗಿಯೇ. ಆದರೆ ಕೆಲ ಜನ ದಂಪತಿಗಳು ತಮ್ಮ ಅಹಂನಿಂದ ಕೌಟುಂಬಿಕ ಕ್ರಿಯೆಗಳಿಂದ ವಂಚಿತತೆ ಉಂಟು ಮಾಡುತ್ತಾರೆ. ಕೌಟುಂಬಿಕ ಜೀವನದಲ್ಲಿ ಸಂತಾನೋತ್ಪತ್ತಿಗೆ ಬಹಳ ಮಹತ್ವದ ಸ್ಥಾನ ಕೊಟ್ಟಿದ್ದಾರೆ.  ಇಂತಹದಕ್ಕೆ ವಿನಾಕಾರಣ ತೊಂದರೆ ಮಾಡುವಂತಹ ಹೆಂಡತಿ ಗಂಡನ ಮನೆಯಲ್ಲಿದ್ದರೂ ಅಷ್ಟೆ, ತವರುಮನೆಯಲ್ಲಿದ್ದರೂ ಅಷ್ಟೆ ಅನಿಸುತ್ತದೆ. ಅದರಂತೆ ಭಾರಿ ಶ್ರೀಮಂತಿಕೆಯುಳ್ಳವರು ಕೃಪಣರಾಗಿರುತ್ತಾರೆ. ಎಷ್ಟು ಕೃಪಣರೆಂದರೆ ಹಬ್ಬದಲ್ಲೂ ದುಡ್ಡಿನ ಸಗಣಿ ತಿನ್ನದವರಾಗಿರುತ್ತಾರೆ. ಅಂಥವರು ಸಾಕಷ್ಟು ಹಣವನ್ನು ಹೊಂದಿದರೂ ಹೇಗೆ ಸದುಪಯೋಗ ಪಡಿಸಿಕೊಳ್ಳಬೇಕು ಎಂಬುದನ್ನು ಅರಿತುಕೊಳ್ಳದೆ, ತಾವೂ ಉಪಯೋಗಿಸದೆ ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡುತ್ತಲೇ ಹೋಗುತ್ತಾರೆ. ಮನುಷ್ಯ ತನ್ನ ಆಪತ್ಕಾಲದ ಹಣವಾಗಿ ದುಡಿಮೆಯ ಕೆಲ ಸ್ವತ್ತನ್ನು ತೆಗೆದಿರಿಸುವದು ಒಳ್ಳೆಯದೇ ಹಾಗೆಂದು ನೆಮ್ಮದಿಯುತ ಜೀವನ ಸಾಗಿಸದೆ ಏನೊಂದೂ ಅನುಭವಿಸದೆ ಹೋದಲ್ಲಿ ನಾವು ಎಷ್ಟು ಗಳಿಸಿದ್ದರೂ ನಿರುಪಯೋಗಿ ಅನಿಸುತ್ತದೆ.

2.

ಅಸಹಾಯಕಗೆ ಅಂಜಿಸುವ ಮಾತೇಕೆ
ಅವರೇ ಅಲ್ಲವೇ ನಿಮ್ಮ ಬದುಕ ಸಹಾಯಕೆ,
ನೊಂದು ದೂರಸರಿದರವ ಸಹಾಯಕ
ನಾಯಿಪಾಡದು ನಿಂದು ನಾಯಕ!
                                                      - ಎಮ್ಮೆಚ್ಚೆ 

ವಿಸ್ತೃತ
ಬಾಳುವೆ ಮಾಡಲು, ಏನೊಂದೂ ಆರ್ಥಿಕ ಅಭಿವೃದ್ಧಿಯಾಗಲು ಸ್ವತ್ತುಗಳಿಲ್ಲದೆ ಅಸಹಾಯಕರಾಗಿ ಎಷ್ಟೋ ಜನ ಶ್ರೀಮಂತರ, ಶಕ್ತಿವಂತರ ಕೈ ಕೆಳಗೆ ಪ್ರಾಮಾಣಿಕ ಕೆಲಸ ಮಾಡುತ್ತಾರೆ. ಕೆಲವರು ಮೇಧಾವಿಗಳಿರುತ್ತಾರೆಂದರೆ, ಮಾಲೀಕರು ಹೇಳಿದ್ದಕಿಂತ, ಅಂದಾಜಿಸಿದ್ದಕಿಂತಾ ಹೆಚ್ಚು ಕೆಲಸವನ್ನು ಯಶಸ್ವಿಗೊಳಿಸುತ್ತಾರೆ. ಮಾಲೀಕರ ಸಿರಿವಂತಿಕೆಯನ್ನು ನೋಡಿ ಸೇವಕನ ಶ್ರಮವನ್ನು ಅಂದಾಜಿಸಬೇಕು. ಕೆಲ ಮಾಲೀಕರು ವಿನಾಕಾರಣ ದರ್ಪ ತೋರುತ್ತಾ ಸೇವಕರನ್ನು ಅಂಕಿತದಲ್ಲಿ ಇಟ್ಟುಕೊಳ್ಳುತ್ತಾರೆ. ಇಷ್ಟೆಲ್ಲಾ ಅವರುಗಳ ಸಹನೆಯು ಅನಿವಾರ್ಯತೆಯ ಆಧಾರದ ಮೇಲೆ ನಿಂತಿರುತ್ತದೆ. ಒಂದೊಮ್ಮೆ ಬೇಸತ್ತು ಕೆಲಸ ಬಿಟ್ಟನೆಂದರೆ ದಿನಂಪ್ರತಿ ಸರಿಯಾಗಿ ನಡೆಯುವ ಕೆಲಸಕಾರ್ಯಗಳು ಕುಂಠಿತಗೊಂಡು ಅವನತಿಯತ್ತ ಮಾಲೀಕ ಸಾಗಬೇಕಾಗುತ್ತದೆ. ಇಲ್ಲಿ ವೃತ್ತಿ ಗೌರವ ಎನ್ನುವದು ಬಹಳ ಮಹತ್ವ ಪಡೆದುಕೊಳ್ಳುತ್ತದೆ. ಎಲ್ಲರಿಗೂ, ಎಲ್ಲ ವೃತ್ತಿಯವರಿಗೂ ಸಮಾನ ಗೌರವಗಳಿರುತ್ತದೆ. ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಎಲ್ಲ ಕೆಲಸಗಳನ್ನೂ ಅವರವರ ಯೋಗ್ಯತೆಗೆ ಅನುಸಾರ ಎಲ್ಲರೂ ನೆರವೇರಿಸುವುದು ಅನಿವಾರ್ಯವಾಗಿರುತ್ತದೆ. ಯಾವುದೇ ಕೆಲಸ ಮಾಡುವವನನ್ನು ಕೀಳಾಗಿ ಕಾಣಬಾರದು. ಮಾಲೀಕರು ಚನ್ನಾಗಿರಬೇಕೆಂದರೆ ಸೇವಕನ ತ್ಯಾಗ ಬಹಳ ದೊಡ್ಡದು ಎಂದು ತಿಳಿದುಕೊಳ್ಳಬೇಕು ಮತ್ತು ಅಂಥವರನ್ನು ಪ್ರೀತಿ ಮತ್ತು ಗೌರವದಿಂದ ಕಾಣಬೇಕು. ಸೇವಕರು ಚನ್ನಾಗಿದ್ದರೆ ಮಾಲೀಕರು ಚನ್ನಾಗಿರುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಬೇಕು.

Comments

Popular Posts