1.
ಮೈ ಮನ ಗೆದ್ದ ಗಳಿಗೆ
ಮೈ ನವಿರೇದ್ದ ರಗಳೆ
ಮೈ ಪಳಗಿಸಲು ಮಹಾಮಂತ್ರ ಬೇಕೇ?
ಮೈ ಮಣಿಸಲು ಮನಸೊಂದೇ ಸಾಕೇ?
- ಎಮ್ಮೆಚ್ಚೆ
ವಿಸ್ತೃತ
ಮನುಷ್ಯರು ತಮ್ಮ ಮನಸ್ಥಿತಿಯನ್ನು ನಿಯಂತ್ರಿಸಲು ಸಾಕಷ್ಟು ತರಹದ ಪ್ರಯೋಗಗಳನ್ನು ಕಂಡುಕೊಂಡಿದ್ದಾರೆ. ಮನಸ್ಸು ಹೇಳಿದಂತೆ ದೇಹ ಕೇಳಬೇಕು, ದೇಹ ನಶ್ವರ, ದೇಹವನ್ನು ಅಂಕಿತದಲ್ಲಿ ಇಡದಿದ್ದಲ್ಲಿ ಅವಘಡಗಳು ಸಂಭವಿಸುತ್ತವೆ. ದೇಹ ನವರಸಗಳ ನಾಯಕ, ಅದರಲ್ಲೂ ಯವ್ವನದ ದೇಹದ ಮದ ಹೇಳತೀರದು. ಜಪ, ತಪ,ಧ್ಯಾನ,ಒಂದನೇ,ಮೌನ ಹೀಗೆ ನಾನಾ ತರಹದ ವಿಧಾನಗಳು ಮನಸ್ಸನ್ನು ಬೆಳಗಿಸಿ ದೇಹವನ್ನು ಸುಸ್ಥಿತಿಯಲ್ಲಿಡಲು ಸಹಾಯ ಮಾಡಿವೆ. ಮತ್ತೆ ಕೆಲವರು ಮೈಯ್ಯ ಮದ ಶಮನಗೊಳಿಸಬೇಕೆಂದು ದೇಹ ದಂಡನೆಯ ವ್ರತ ಆಚರಿಸುತ್ತಾರೆ. ಮನಸ್ಸನ್ನು ಸುಸ್ಥಿತಿಯಲ್ಲಿಡಲು ಇಂತಹ ಘೋರ ತರಹದ ಪದ್ದತಿಗಳು ಬೇಕೇ?. ಎನ್ನುವ ಪ್ರಶ್ನೆ ಇಲ್ಲಿ ಮೂಡುತ್ತದೆ. ದೇಹ ಹೆಚ್ಚೋ ಮನಸ್ಸು ಹೆಚ್ಚೋ? ಮನಸ್ಸನ್ನು ನಿಯಂತ್ರಣದಲ್ಲಿಡಲು ದೇಹವನ್ನು ದಂಡನೆ ಮಾಡುತ್ತಾರೆ. ದೇಹವನ್ನು ನಿಯಂತ್ರಣದಲ್ಲಿಡಲು ಮನಸ್ಸನ್ನು ನಿಯಂತ್ರಿಸತ್ತಾರೆ. ಇವೆರಡು ಕ್ರಿಯೆಗಳು ಸಮನ್ವಯತೆಯಿಂದ ಜರಾಗುತ್ತಾವೆ ಆದರೂ ದೇಹವು ಮನಸ್ಸನ್ನು ಮೀರಿ ಹೋಗುತ್ತವೆ, ಹದ್ದು ಮೀರಿ ವರ್ತಿಸಿ ಸಮಾಜ ಕಂಟಕ ಕೆಲಸಗಳಿಗೆ ನಂದಿ ಹಾಡುತ್ತವೆ. ದೇಹವು ತನ್ನ ಮದದಿಂದ ಎಷ್ಟೇ ಹಾರಾಡುತ್ತದೆ ಎಂದರೂ ಕಾಲದ ಮುಂದೆ ಸೋಲಲೇಬೇಕೆಂಬ ಸತ್ಯವನ್ನು ತಿಳಿದುಕೊಳ್ಳಲೇಬೇಕು. ಆದ್ದರಿಂದ ಇಂದು ಮನಸ್ಸನ್ನು ಸುಸ್ಥಿತಿಯಲ್ಲಿಟ್ಟುಕೊಂಡು ದೇಹಕ್ಕೆ ಮಾಡ ಏರದಂತೆ ಸಮನ್ವಯದ ನಿಯಂತ್ರಣದಿಂದ ಎಲ್ಲರೂ ಬದುಕಿದ್ದೇ ಆದಲ್ಲಿ ಒಳ್ಳೆಯ ಸಮಾಜ ನಿರ್ಮಾಣವಾಗುವದರಲ್ಲಿ ಸಂದೇಹವೆಯಿಲ್ಲ.
2.
ಬಾಡಿಗೆ ಜೀವದ ಭೋಗದ ಕಾಯ
ಅರಿವಿನ ಹಣತೆಯ ಜ್ಞಾನದ ದೀಯ,
ಕರಿನಾಯಿ ಮಾಯೆ ಹೊಕ್ಕಿತ್ತು ಲಾಯ
ಕಾಮಕತ್ತಲೆ ಮೋಹಮುಸುಕಿದ ಮಾಯ!
- ಎಮ್ಮೆಚ್ಚೆ
ವಿಸ್ತೃತ
ದೇಹಕ್ಕೆ ಅಳಿವುಂಟು ಆತ್ಮಕಲ್ಲ. ದೇಹ ಸತ್ತೊಡನೆ ಆತ್ಮ ಬೇರೆ ದೇಹದಲ್ಲಿ ಅನುಸ್ಟಾನಗೊಳ್ಳುವದಂತೆ. ನಿಸರ್ಗದಲಿ ಏನೆಲ್ಲ ಅನುಭವಿಸುವದಕ್ಕಾಗಿಯೇ ಈ ದೇಹವೆನ್ನುವದಿದೆ. ದೈಹಿಕವಾಗಿ ಸಮರ್ಥರಾಗಿದ್ದಷ್ಟು ಹೆಚ್ಚು ಅನುಭವಿಸುವದಕ್ಕೆ ಅನುಕೂಲಕರವಾದುದು. ಆದರೆ ಜನರು ಭೋಗದ ಲಾಲಸೆಗೆ ಒಳಗಾಗಿ ಬೇಕಾಬಿಟ್ಟಿ ಬಳಸಿ ದೇಹಸಿರಿಯನ್ನು ಕೆಡಸಿಕೊಳ್ಳುತ್ತಾರೆ. ತಿಳುವಳಿಕೆ ಇದ್ದರೆ ಅನುಭವಿಸುವಿಕೆ ಕುಂಟಿತಗೊಳ್ಳುತ್ತದೆ. ಈ ಅನುಭವಿಸುವಿಕೆ ಕ್ರಿಯೆಯನ್ನು ಬೇಕಾಬಿಟ್ಟಿ ಅಂಕೆಮೀರಿ ಅನುಭವಿಸಿದರೆ ಕೆಟ್ಟದ್ದನ್ನು ಪಡೆದುಕೊಳ್ಳಬೇಕಾಗುತ್ತದೆ. ಆದ್ದರಿಃದ ಭೊಗಿಗಳಾಗಿ ನಮ್ಮ ಆಯುಷ್ಯ ಕಡಿಮೆ ಮಾಡಿಕೊಳ್ಳುವ ಬದಲು, ಪ್ರಜ್ಞಾವಂತರಾಗಿ ತಿಳುವಳಿಕೆಯಿಂದ ವಿಷಯಸಂಗತಿಗಳನ್ನು ಅರಿತು ಅನುಭವಿಸಬೇಕು. ಆಸೆ ಆಕಾಂಕ್ಷೆಗಳನ್ನು ಹರಿಬಿಡಬಾರದು. ಅರಿವು ಉಳ್ಳವರಾದ ನಾವುಗಳು ಜ್ಞಾನದ ದೀಪ್ತಿಯನ್ನು ಬೆಳಗಿಸಬೇಕು. ಜನರು ಎಷ್ಟೇ ಪ್ರಜ್ಞಾವಂತರಾದರೂ ಒಮ್ಮೊಮ್ಮೆ ಮಾಯೆಯ ಮುಸುಕಿಗೆ ಒಳಗಾಗಿ ತಮ್ಮತನವನ್ನು ಕಳೆದುಕೊಂಡು ವ್ಯತಿರಿಕ್ತವಾಗಿ ಮೃಗಗಳಂತಾಗಿ ಬಿಡುತ್ತಾರೆ. ಅದರಲ್ಲೂ ಕಾಮಾಂದತೆ ಎನ್ನುವ ಕೀಚಕತನ ಸೇರಿಕೊಂಡರಂತೂ ಮುಗಿದೇ ಹೊಯಿತು. ಮೊಹಭರಿತ ಕಾಮಾಂದ ವ್ಯಕ್ತಿಗಳು ಮಾನಸಿಕ ರೋಗದಿಂದ ಬಳಲುವಂತಹರೂ, ಸಮಾಜ ಕಂಟಕರೂ ಆಗಿರುತ್ತಾರೆ. ಆದ್ದರಿಂದ ಮೊಹದ ಮಾಯಾಜಾಲಗಳಿಗೆ ಬಲಿಯಾಗದಂತೆ ನಮ್ಮ ಜ್ಞಾನ, ತಿಳುವಳಿಕೆಗಳಿಂದ ಬದುಕಿ ಸದ್ಗತಿಕಾಣಬೇಕು. ಕೇವಲ ದೇಹ, ರೂಪದ ಬಲಗಳಿಂದ ಬದುಕಬಾರದು. ದೇಹ ನಶ್ವರವಾದುದು, ತಾತ್ಕಾಲಿಕವಾದುದು.
3.
ತಿಳಿದೂ ತಿಳಿಯದಂತೆ ಬದುಕುವದದೆಂತ ಮಾಯೆ
ಬೆಂಬಿಡದೆ ಬರುತಿಹುದು ಬೆಳದಿಂಗಳ ಛಾಯೆ,
ತನ್ನೆಣ್ಣೆ ಮುಗಿದಾಗ ತಣ್ಣಗಾದಾನು ತಾ ಸೂರ್ಯ
ವ್ಯಾಪಾರದ ದಿವ್ಯ ಸೃಷ್ಠಿಯದು ವಿಜ್ಞಾನಕಾರ್ಯ!
- ಎಮ್ಮೆಚ್ಚೆ
ವಿಸ್ತೃತ
ಎಲ್ಲ ವಿಷಯಗಳನ್ನೂ ಕರತಾಮಲಕ ಮಾಡಿಕೊಂಡಿರುವ ಎಷ್ಟೊ ಜನರು ತಾವುಗಳು, ಆ ವಸ್ತು ಸ್ಥಿತಿಯ ಬಗ್ಗೆ ನಿಖರವಾದ ತಿಳುವಳಿಕೆ ಇದ್ದೂ ಸಹ ಏನೂ ಮಾಹಿತಿ ಇಲ್ಲದವರಂತಿರುತ್ತಾರೆ. ಇದನ್ನು ಮಾಯೆ ಎನ್ನಬೇಕೊ, ಮರೆವು ಎನ್ನಬೇಕೊ, ಅಸಡ್ಡೆ ಅನ್ನಬೇಕೊ, ಅಥವಾ ಅಸಹಾಯಕತೆ ಅನ್ನಬೇಕೊ ತಿಳಿಯುತ್ತಿಲ್ಲ. ಇದು ಇದ್ದುದನ್ನು ಇಲ್ಲದಂತೆ ಮಾಡುವ ಸ್ಥಿತಿಯಾಗಿರುತ್ತದೆ. ಅರೆವಿನ ಕೊನೆಯ ಸ್ಥಿತಿಯೇ ಮರೆವು. ಆದ್ದರಿಂದ ಅರಿವು ಮರೆವುಗಳ ಅಂತರ ಬಹಳ ಕಡಿಮೆ. ನಾವುಗಳು ಎಷ್ಟೇ ಹುಷಾರಾಗಿ ಇರುತ್ತೇವೆಂದರೂ ಸಹ ಮಾಯೆಗೆ ಒಳಪಡುವ ಸ್ಥಿತಿ ಅಧಿಕವಾಗಿರುತ್ತದೆ. ಅದು ಚಂದಿರನ ಬೆಳಕಿನಲ್ಲಿ ಕಾಣುವ ನೆರಳು ಇದ್ದಹಾಗೆ, ನಾವುಗಳು ಸಂಚರಿಸಿದಂತೆಲ್ಲ ನಮ್ಮೊಂದಿಗೇ ಸಾಗಿ ಬರುವಂತೆ ಅರವಿನೊಂದಿಗೇ ಮರೆವಿನ ಮಾಯೆಕೂಡ ಬೆನ್ನು ಹತ್ತಿಬರುತ್ತದೆ. ಮಹಾಭಾರತದಲ್ಲಿ ಅರ್ಜುನ ಹೇಳಿದಂತೆ, ಧರ್ಮವೆಂದರೆ ಏನೆಂದು ತಿಳಿದಿದೆ ಹಿಡಿಯಲು ಮನಸ್ಸು ಒಪ್ಪುತ್ತಿಲ್ಲ. ಅಧರ್ಮ ವೆಂದರೇನೆಂದು ಗೊತ್ತಿದೆ ಆದರೆ ಅದನ್ನು ಬಿಡಲು ಆಗುತ್ತಿಲ್ಲ ಎನ್ನುವ ಪರಿಸ್ಥಿತಿ ಒದಗಿಬಿಟ್ಟಿದೆ. ನಮ್ಮ ಜೀವಿತದ ಎಷ್ಟೊವಿಷಯಗಳಲ್ಲಿ ನಾವು ಮಾಡುವದು ತಪ್ಪಾದುದು ಎಂದು ತಿಳಿದಿದ್ದರೂ ಸಹ ಅದನ್ನು ಮಾಡಲು ಬಯಸುತ್ತೇವೆ, ಯಾವುದು ಸರಿಯಾದುದು ಎಂದು ತಿಳಿದಿದ್ದರೂ ಮಾಡಲು ಮನಸೊಪ್ಪುವದಿಲ್ಲ. ಮಾನವ ಮನಸು ಹೀಗೇಕೆಂದು ತಿಳಿಯುತ್ತಿಲ್ಲ.
ಜಗತ್ತಿಗೇ ಬೆಳಕನ್ನು ನಿರಂತರವಾಗಿ ನೀಡುವ ಅದ್ಭುತ ಶಕ್ತಿಯಾದ ಸೂರ್ಯನೂ ನಾಶವಾಗಿ ಇಲ್ಲದಾಗಿ ಬಿಡುತ್ತಾನೆನ್ನುವದನ್ನು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.ಎಲ್ಲ ಗ್ರವಗಳು ಸೂರ್ಯನ ಬೆಳಕಿನಿಂದ ಪ್ರತಿಫಲನದಿಂದ ಹೊಳೆಯುತ್ತವೆ ವಿನಹ ಸ್ವಂತ ಶಕ್ತಿಯಿಂದಲ್ಲ ಎನ್ನುವದನ್ನು ತಿಳಿದುಕೊಂಡಿದ್ದೇವೆ.ಸೂರ್ಯನು ತನ್ನ ಸ್ವಪ್ರಜ್ವಲಿತದ ಇಂದನ ಶಕ್ತಿಯೇ ಹೀಲಿಯಂ ಎನ್ನುವ ರಾಸಾಯನಿಕ ಪದಾರ್ಥ ಎಂದು ವಿಜ್ಞನಿಗಳು ತಿಳಿಸಿಕೊಟ್ಟಿದ್ದಾರೆ. ಸೂರ್ಯ ವ್ಯೂಹದಲ್ಲಿ ಈಗಿರುವ ಹೀಲಿಯಂ ಕೆಲವೇ ಸಾವಿರಾರು ವರ್ಷಗಳಲ್ಲಿ ಖಾಲಿಯಾಗಲಿದ್ದು ನಂತರ ಸೂರ್ಯ ತನ್ನ ಬೆಳಕನ್ನು ಕಳೆದುಕೊಂಡು ಇಲ್ಲವಾಗಿಬಿಡುತ್ತಾನೆನ್ನುವುದು ಕಟುಸತ್ಯ. ಪ್ರಜ್ವಲಿಸುವ ಸೂರ್ಯ ತಂಪಿನ ಚಂಡಾಗುವದು, ಸೃಷ್ಠಿ ತನ್ನ ಲಯ ಕಳೆದುಕೊಳ್ಳಬಹುದು, ಜೀವರಾಶಿಗಳ ಲಯವಾಗಬಹುದು.
ವಿಜ್ಞಾನ ಏನೆಲ್ಲವನ್ನೂ ತನ್ನ ಪರಿಧಿಗೆ ತೆಗೆದುಕೊಳ್ಳುತ್ತ. ಅದರ ಅಪಾರವಾದ ಉಪಯೋಗಗಳನ್ನು ಪ್ರಗತಿಪರದ ಹೆಸರಿನಲ್ಲಿ ಮನುಕುಲಕ್ಕೆ ತಲುಪಿಸುತ್ತ ವ್ಯಾಪಾರೀಕರಣಮಯ ಮಾಡಿದ್ದಾರೆ. ಈ ವಿಷಯವಾಗಿ ಜಗತ್ತಿನ ಎಲ್ಲ ರಾಷ್ಟ್ರಗಳೂ ಪೈಪೊಟಿಗಿಳಿದು ವ್ಯಪಾರೀಕರಣದತ್ತ ಮುಖಮಾಡಿವೆ. ಯಾರು ಎಷ್ಟೇ ಪ್ರಯತ್ನಪಟ್ಟರೂ ಯಾರಿಗೂ ಈ ದಿವ್ಯ ಸ್ರೃಷ್ಠಿಯ ಅಘಾದ ವಿಸ್ಮಯತೆಯನ್ನು ಭೇದಿಸಲು ಸಾದ್ಯವಿಲ್ಲವೆನ್ನುವುದೂ ಅಷ್ಟೇ ಸತ್ಯವಾದುದು. ಮತ್ತು ಈ ಘಟನೆಗೆ ನಾವು ಜೀವಂತ ಸಾಕ್ಷಿಗಳಾಗುವದಿಲ್ಲ ಅನ್ನುವುದೇ ಸಮಾಧಾನ.
Comments
Post a Comment
Liked the post? Don't forget to tell us, do comment.