1.
ಮುಟ್ಟುವ ಮೊದಲು ಬಲು ಎಚ್ಚರಿರು,
ಬೆಚ್ಚನೆಯ ಬದುಕು ಎಂಥ ಸುಂದರ
ಹೆಚ್ಚಾದರದೇ ಚಿತೆ ಬಲು ಎಚ್ಚರ!
- ಎಮ್ಮೆಚ್ಚೆ
ವಿಸ್ತೃತ
ಬೆಂಕಿಯ ಕೆಲಸವೇ ಸುಡುವದು. ದಹಿಸುವ ಶಕ್ತಿ ಅದರಲ್ಲಿ ನಿರಂತರವಾಗಿರುತ್ತದೆ. ಬೆಂಕಿ ಕೆನ್ನಾಲಿಗೆ ಚಾಚಿತೆಂದರೆ ಇಂತಹ ಕಾಡು ಮೇಡುಗಳನ್ನೂ ಸುಟ್ಟು ಬೂದಿಯಾಗಿಸಿಬಿಡುತ್ತದೆ. ನೀರು ಮಾತ್ರ ಇದರ ನಿಯಂತ್ರಕವೇ ಹೊರತು ಉಳಿದುದೆಲ್ಲ ಅದಕ್ಕೆ ಪೂರಕವೇ. ಆದ್ದರಿಂದ ಇಂಥ ಸುಡುವ ಬೆಂಕಿಯಿಂದ ನಾವು ದೂರವಿರಬೇಕು. ಒಂದೊಮ್ಮೆ ಆತ್ಮೀಯತೆಯಿಂದ ಇದರೊಂದಿಗೆ ಬೆರೆತಲ್ಲಿ ನಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳಬೇಕಾಗುತ್ತದೆ. ಅದಕ್ಕೆ ಎಚ್ಚರಿಕೆಯಿಂದ ವ್ಯವಹರಿಸಬೇಕು. ಒಂದೊಮ್ಮೆ ಆ ಸುಡುವ ಬೆಂಕಿಯನ್ನು ಮುಟ್ಟಬೇಕೆಂದರೆ ದಹಿಸುತ್ತೆದೆಂಬ ಅದರ ಧರ್ಮ ಗುಣವನ್ನೂ ತಿಳಿದಿರಬೇಕು. ಅದರಂತೆ ಕೆಟ್ಟ ಜನಗಳ ಸಂಗ ಮಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಸ್ವಲ್ಪ ಯಾಮಾರಿದರೂ ನಮ್ಮ ಜೀವನವನ್ನೇ ಹಾಳು ಮಾಡಿಕೊಂಡು ಬಿಡುತ್ತೇವೆ. ಮಾನಸಿಕ ನೆಮ್ಮದಿಯನ್ನು ಕೊಂದುಬಿಡುತ್ತಾರೆ. ಆದ್ದರಿಂದ ಮನುಷ್ಯರಾದವರು ಅಂತಹ ದುಷ್ಟರ ಸಂಗ ಮಾಡದೆ ನಮ್ಮ ಬದುಕನ್ನು ನಾವೇ ಸುಂದರವಾಗಿ ಕಟ್ಟಿಕೊಳ್ಳಬೇಕು. ಅಂದರೆ ನೆಮ್ಮದಿಯುತ ಜೀವನ ನಮ್ಮದಾಗುತ್ತದೆ. ಇದನ್ನು ಬಿಟ್ಟು ನೆಮ್ಮದಿಯುತ ಜೀವನದ ನೆಪದಲ್ಲಿ ನಮ್ಮ ಇಂದ್ರಿಯಗಳನೆಲ್ಲ ಹರಿ ಬಿಟ್ಟು ನಮ್ಮ ಗೋರಿಯನ್ನು ನಾವೇ ತೋಡಿಕೊಂಡು ಸಾವಿಗಾಗಿ ಕಾದಂತೆ ಆಗುತ್ತದೆ.
ಆದ್ದರಿಂದ ಎಲ್ಲರು ಸಮಾನ ಸ್ಥಿತಿ ಉಳ್ಳವರಾಗಿ ಒಳ್ಳೆಯ ಸಮಾಜದ ನೆಮ್ಮದಿ ಹಾಳುಗೆಡವದೆ ನೆಮ್ಮದಿಯುತ ಬಾಳಬೇಕಾದುದು ಮಹತ್ವವಾಗಿರುತ್ತದೆ.
2.
ಮರೆವು ಬಲು ಮಾನಗೇಡಿ
ಮಾಡದೆ ಬಿಡುವದೇ ಅದು ಮೋಡಿ,
ಮನಸದು ಭಾರಿ ಹುಚ್ಚು ಕೋಡಿ
ಬೆನ್ನತ್ತಿ ಓಡಬಾರದು ನೋಡಿ!
- ಎಮ್ಮೆಚ್ಚೆ
ವಿಸ್ತೃತ
ನಾವು ಎಷ್ಟೇ ಜ್ಞಾನವಂಥ ಮೇಧಾವಿಗಳಾದರೂ, ಪ್ರಜ್ಞಾವಂತರಾದರೂ ಕೆಲವೊಮ್ಮೆ ನಮ್ಮ ಮನಸು ಶೂನ್ಯ ಸ್ಥಿತಿಗೆ ಬಂದು ಪ್ರಚಲಿತತೆಯನ್ನೇ ಮರೆತುಬಿಡುತ್ತೇವೆ. ಎಷ್ಟೋ ಪಂಡಿತರು, ಹೆಚ್ಚು ಓದಿಕೊಂಡವರು ತಮ್ಮ ಮರೆವುತನಕ್ಕೊಳಗಾಗಿ ಅಪಹಾಸ್ಯಕ್ಕೆ ಇಡಾದದನ್ನು ನೋಡಿದ್ದೇವೆ. ಇದು ಒಂದು ತರಹದ ಮಾನಸಿಕ ರೋಗವೆಂತಲೂ ವೈದ್ಯ ಶಾಸ್ತ್ರ ಹೇಳುತ್ತದೆ. ಮೆದುಳಿಗೆ ಬಹಳ ಒತ್ತಡ ಉಂಟಾಗುತ್ತ ಬಂದಂತೆಲ್ಲ ಮರೆಗೂಳಿತನದ ರೋಗ ಹೆಚ್ಚಾಗುತ್ತದೆ. ವಯಸ್ಸಾದವರಿಗೆ ಎದು ಸಾಮಾನ್ಯ ಅದಕ್ಕೆಂದೇ ಅರವತ್ತಕ್ಕೆ ಅರಳುಮರಳು ಎನ್ನೋದು. ಒಟ್ಟಾರೆ ಸ್ವಾಭಾವಿಕವಾಗಿ ವಯಸಾಗುತ್ತ ಬಂದಂತೆಲ್ಲ ಮರೆಗೂಳಿತನ ಹೆಚ್ಚಾಗುತ್ತದೆ.
ನಾವು ನಮ್ಮ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳದೆ ಬೇಕಾ ಬಿಟ್ಟಿ ಹರಿಬಿಟ್ಟರೆ, ಬೇಕಾಬಿಟ್ಟಿ ನೋವನ್ನು ಪಟ್ಟುಕೊಳ್ಳಬೇಕಾಗತ್ತದೆ. ಮನಸ್ಸನ್ನು ನಿಯಂತ್ರಣದಲ್ಲಿಡುವದು ನಿಜವಾಗಿಯೂ ಅತೀ ದೊಡ್ಡ ಸಾಧನೆ. ಈ ಸಾಧನೆಯ ಗುರಿ ಮುಟ್ಟಲು ನಾನಾ ತರಹದ ಮಾರ್ಗಗಳಿರುತ್ತವೆ. ನಮ್ಮ ಸ್ಥಿತಿಗತಿಗಳಿಗೆ ಯಾವ ಮಾರ್ಗ ಹೊಂದುತ್ತದೋ ಆ ಮಾರ್ಗದಲ್ಲಿ ಕ್ರಮಿಸುತ್ತ ಸಾಧನೆ ಮಾಡುತ್ತಾ ಹೋಗಬೇಕು. ಇದನ್ನು ಬಿಟ್ಟು ಕೆಲವು ಜನರು ಮನೋನಿಗ್ರಹವಿಲ್ಲದೆ ಲೋಲುಪತೆಯಿಂದ ತಮ್ಮ ಇಂದ್ರಿಯದ ದಾಸರುಗಳಾಗುತ್ತಾರೆ. ಅಂಥವರು ಸಮಾಜ ಕಂಟಕರಾಗುವುದರೊಂದಿಗೆ ತಮ್ಮ ಅಮೂಲ್ಯವಾದ ಆಯುಷನ್ನು ಕುಂಠಿತಗೊಳಿಸಿಕೊಳ್ಳುತ್ತಾರೆ.
ಆದ್ದರಿಂದ ಯಾವುದೇ ಅತ್ಯಾಸೆಗೆ ಬೀಳದೆ ಸ್ಥಿತಪ್ರಜ್ಞತೆಯಿಂದ ಬದುಬೇಕಾದುದು ಅವಶ್ಯಕವಾಗಿರುತ್ತದೆ.
Comments
Post a Comment
Liked the post? Don't forget to tell us, do comment.