1.
ನೀನಿರುವ ಕನಸಿಗೇಕೆ ಕೊನೆ ?
ನಡು ನಿಶಬ್ದದ ರಾತ್ರಿಯಲಿ
ಅರೆ ಮುಚ್ಚಿರುವ ಕಣ್ಣುಗಳು
ಹಾಳು ಮನಸು ಹಂಬಲಿಸುವುದು
ಆ ನಿನ್ನ ಮೃದು ಮಾತುಗಳ!
ಹಾಸಿಗೆಯ ಪಕ್ಕದಲಿ ಯಾರೋ ಕುಳಿತು
ನನ್ನ ನೆನಪಿದೆಯಾ ಎಂದಂತಿದೆ
ಕಣ್ಬಿಟ್ಟು ನೋಡಲು ಬಯಕೆ ಎನಗೆ
ಕಣ್ಬಿಡಲು ನೀನಿಲ್ಲದ ಅರಿವು ನನಗೆ!
ಅರೆ ಮುಚ್ಚಿದ ಕಂಗಳ ಪೂರ್ತಿ ಮುಚ್ಚಿಸಿ
ಅರಿತೆನು ನೀನಿರುವುದು ಕನಸಲ್ಲಿ ಮಾತ್ರ
ನೀನಿರುವ ಕನಸಿಗೇಕೆ ಕೊನೆ ?
ನೀನಿಲ್ಲದ ನನಸಾಗಲಿ ಕೊಲೆ!
ಕನಸಲ್ಲಿ ಬಯಸುವೆ ನಿನ್ನ ಕ್ಷೆಮವ
ದಿನವಿಡೀ ಕೇಳುವೆ ನಿನ್ನಯ ದನಿಯ
ನನ್ನಯ ಬಾಳಲಿ ನೀ ತುಂಬಿರುವೆ
ನಿನ್ನಯ ನೆನಪಲಿ ನಾ ಬದುಕಿರುವೆ!
- ವೀರು
2.
ಕಾವಿತೊಟ್ಟವರೊಬ್ಬರೇನಲ್ಲ ಸ್ವಾಮಿ
ಬಾಳಿಗೆ ತಾವು ಕೊಟ್ಟವರೂ ಕೂಡ,
ಯಾಕೋ ಬೆಲೆ ಹೆಚ್ಚು ಜಾತಿ ನಾಯಿ
ಮನುಜರೊಂದೆನ್ನುವುದು ಬರೀ ಶಹನಾಯಿ!
-ಎಮ್ಮೆಚ್ಚೆ
ವಿಸ್ತೃತ
ಧಾರ್ಮಿಕ ಸೇವೆಗೆ ತಮ್ಮನ್ನು ತೊಡಗಿಸಿಕೊಂಡವರು ಕಾವಿಧಾರಿ ಆಗುವುದು ಸರ್ವೇ ಸಾಮಾನ್ಯ. ಆದರೆ ಡೋಂಗಿ ಜನರೇ ಇತ್ತಿತ್ತಲಾಗಿ ಹೆಚ್ಚು ಕಾವಿಧಾರಿಯಾಗುತ್ತಿದ್ದಾರೆ. ನಿಜವಾದ ಕಾವಿಧಾರಿ ಪರಿತ್ಯಾಗಿಗಳು ಸಮಾಜವನ್ನು ಸೂಸ್ಥಿತಿಯಲ್ಲಿಡಲು ಪ್ರಯತ್ನಿಸುವದರೊಂದಿಗೆ ಪೂಜ್ಯನೀಯರಾಗಿರುತ್ತಾರೆ. ಕೇವಲ ಕಾವಿಧಾರಿಗಳಷ್ಟೇ ಅಲ್ಲ, ನಮ್ಮ ಜೀವನಗಳನ್ನು ಉನ್ನತೀಕರಿಸಲು ಸಹಾಯ ಮಾಡಿದವರೆಲ್ಲರೂ ಗೌರವಕ್ಕೆ ಭಾಜನರೇ ಆಗಿರುತ್ತಾರೆ. ಮನುಷ್ಯ ಕುಲವನ್ನು ಒಂದೇ ಎಂದು ಬೊಬ್ಬೆ ಹಾಕುವ ನಾವುಗಳು, ಉಳಿದ ಪ್ರಾಣಿಗಳನ್ನು ಸಾಕಬೇಕೆಂದರೆ ಒಳ್ಳೆಯ ಜಾತಿಯ ತಳಿಗಳೇ ಬೇಕೆಂದು ಬೊಬ್ಬೆಯಿಡುತ್ತೇವೆ. ಎಲ್ಲವೂ ತಮ್ಮತನಗಳನ್ನುಳಿಸಿಕೊಂಡ ಜಾತಿಯ ಪ್ರಾಣಿಗಳೆಂದು ತಿಳಿದಿಕೊಳ್ಳುವುದೇ ಇಲ್ಲ.
3.
ಪರಪೀಡನೆಗೆ ನೊಂದು
ಸಹಿಸಿಕೊಳ್ಳುವವನವ ಜ್ಞಾನಿ,
ಪರ ಪೀಡನೆಗೋಸ್ಕರವೇ
ಹುಟ್ಟಿರುವವನವ ಅಜ್ಞಾನಿ!
-ಎಮ್ಮೆಚ್ಚೆ
ವಿಸ್ತೃತ
ಕೆಲವು ಜನರು ಸಾಕಷ್ಟು ವಿಧ್ಯೆಯನ್ನು ಸಂಪಾದಿಸಿಕೊಂಡು ಮಹಾನ್ ಪಂಡಿತರಾಗಿರುತ್ತಾರೆ. ಬಹಳ ವರ್ಷಗಳನ್ನು ಜ್ಞಾನಾರ್ಜನೆಗೆ ಮೀಸಲಿಟ್ಟು, ಸಾಮಾಜಿಕ ಸಂಕೀರ್ಣತೆಯಿಂದ ದೂರ ಉಳಿದಿರುತ್ತಾರೆ. ನಂತರ ಸಾಮಾಜಿಕ ಸಂವಹನದ ವೇಗಕ್ಕೆ ಹೊಂದಿಕೊಳ್ಳುವದಿಲ್ಲ. ಪರರ ಸ್ವಲ್ಪ ಅತೀರೇಕದ ನಡುವಳಿಕೆಗಳೂ ಇವರಿಗೆ ಬೃಹದಾಕಾರವಾಗಿ ಕಾಡುತ್ತದೆ. ಇವುಗಳನ್ನೆಲ್ಲ ಜ್ಞಾನಿ ನೋವು ಪಡುತ್ತಲೇ ಸಹಿಸಿಕೊಳ್ಳುತ್ತಾನೆ. ಇತ್ತ ಇನ್ನು ಕೆಲ ಜನ ಬುದ್ದಿಗೇಡಿಗಳು, ಜ್ಞಾನದ ಕೊರತೆಯಿಂದಾಗಿ ಮತ್ತು ತಮ್ಮ ಚಿಲ್ಲರೆ ಮನೋರಂಜನೆಗೋಸ್ಕರ ಸಂಭಾವಿತ ಬುದ್ದಿವಂತರನ್ನು ಅಪಹಾಸ್ಯ ಮಾಡುತ್ತಾ ವಿನಾಕಾರಣ ತೊಂದರೆ ಕೊಡುತ್ತಾರೆ. ಅಂಥವರಿಗೆ ಯಾವ ತಿಳಿವಳಿಕೆ ಹೇಳಿದರೂ ತಿಳಿದುಕೊಳ್ಳುವದಿಲ್ಲ. ಅಂಥವರು ಇನ್ನೊಬ್ಬರಿಗೆ ತೊಂದರೆ ಕೊಡುವುದಕ್ಕಾಗಿಯೇ ಜನ್ಮಿಸಿದ್ದಾರೆನ್ನಿಸುತ್ತದೆ.
Comments
Post a Comment
Liked the post? Don't forget to tell us, do comment.