1.

ಹುಲಿ ಹೆಜ್ಜೆ ಇಟ್ಟರದುವೇ ಬೇಟೆ 
ಕೋಳಿ ತತ್ತಿಯಿಟ್ಟರಾಗುವದು ಹೇಂಟೆ,
ಬೇಟೆ ಹೇಂಟೆಗಳು ತನಗೆಂಬ ಹುಂಬು 
ಸಕಲ ಜೀವಿಗಳೆಲ್ಲವೂ ಒಂದೆಂದು ನಂಬು!
                                                                   - ಎಮ್ಮೆಚ್ಚೆ 

ವಿಸ್ತೃತ 

ಕಾಡಿನ ಎಲ್ಲ ಪ್ರಾಣಿಗಳ್ಲಲೂ ಅತಿ ಹೆಚ್ಚು ಗಾಂಭೀರ್ಯತೆಯನ್ನು ಪಡೆದುಕೊಂಡುದು ಕಾಡಿನ ರಾಜ ಹುಲಿ. ಅದು ಹೊರಟಿತೆಂದರೆ ತನಗೆ ಎದುರು ಸಿಕ್ಕ ಯಾವುದೇ ಪ್ರಾಣಿಯನ್ನೂ ಭೇಟೆಯಾಡಿಯೇ ತೀರುತ್ತದೆ. ಅದೇ ರೀತಿ ಕೋಳಿಯ ಮರಿ ಬೇಕೆಂದರೆ, ತತ್ತಿ ಹಾಕಿ ಅವುಗಳಿಗೆ ಕಾವುಕೊಡಬೇಕು ಇಲ್ಲದಿದ್ದರೆ ಇಲ್ಲ. ಅವು ನೇರವಾಗಿ ಮರಿಯನ್ನು ಹಾಕುವದಿಲ್ಲ. ಹೀಗೆಲ್ಲ ಇದ್ದರೂ ಸಹ ದುರುಳ ಮನುಷ್ಯರು ಪ್ರಾಣಿಗಳ ತರಹ ಪ್ರಾಣಿಗಳನ್ನು ಕೊಲ್ಲುವದಾಗಲಿ, ಕೋಳಿ ತತ್ತಿಗಳೆಲ್ಲವೂ ತನಗಾಗಿಯೇ ಇವೆ ಎಂಬ ಭ್ರಮೆಯಲ್ಲಿದ್ದಾನೆ. ಇಂತಹ ಮೂರ್ಖ ತನವನ್ನು ಬಿಟ್ಟು ಜಗತ್ತಿನಲ್ಲಿ ಸೃಷ್ಟಿಯಾಗುವ ಪ್ರತಿಯೊಂದು ಜೀವಿಗಳೂ ಮನುಷ್ಯ ಜೀವಿಗಳಂತೆಯೇ ಎಂದು ತಿಳಿದುಕೊಳ್ಳಬೇಕು.  

2.

ರಾಗರೋಗದಂಶ ಇರಬಾರದು ತ್ಯಾಗದಲಿ 
ಸೋಗುಸೊಂಕಿನಂಶ ಸೇರಬಾರದು ಭೋಗದಲಿ,
ಸೊಂಕಿನ ರೋಗವಳಿದು ಸೋಗಿನ ರಾಗ ಕಳೆದು 
ಸಾಗಲಿಯದು ತ್ಯಾಗ ಭೋಗದ ಬತ್ತಳಿಕೆ ಬೆಳೆದು!
                                                                          - ಎಮ್ಮೆಚ್ಚೆ 

ವಿಸ್ತೃತ 

ಇನ್ನೊಬ್ಬರಿಗೆ ಏನನ್ನಾದರೂ ಕೊಟ್ಟುಬಿಡಬೇಕೆಂದರೆ ಮನಃಪೂರ್ವಕವಾಗಿ ನಿಸ್ವಾರ್ಥ ಹಾಗೂ ನಿರಾಪೇಕ್ಷೆಯಿಂದ ಕೊಡಬೇಕು ಅಂದರೆ ಮಾತ್ರ ಅದು ತ್ಯಾಗ, ದಾನವಾಗುತ್ತದೆ. ಅದರಲ್ಲಿ ಫಲಾಪೇಕ್ಷೆ ಇದ್ದರೆ ವ್ಯವಹಾರವಾಗುತ್ತದೆ. ಅದೇ ರೀತಿ ಭೋಗಕ್ರಿಯೆಯಲ್ಲೂ ಪರಸ್ಪರ ರೋಗದ ವಿನಿಮಯದ ಸಂದರ್ಭ ಜರಗುವದರಿಂದ ಎಲ್ಲಕ್ಕಿಂತ ಹೆಚ್ಚು ವಿಶ್ವಾಸಾರ್ಹತೆ ಮುಖ್ಯವಾಗಿರುತ್ತದೆ. ಆದ್ದರಿಂದ ದೈಹಿಕ ಕ್ಷಮತೆಯುಳ್ಳವರಾಗಿ, ವಿಶ್ವಾಸಾರ್ಹತೆಗೆ ಭಾಜನರಾಗಿರುವುದು ಎಲ್ಲರಿಗೂ ಮುಖ್ಯವಾಗಿರುತ್ತದೆ. 

Comments

Popular Posts