1. 


ಪದೇ ಪದೇ ನೊಡುತಿರುವೆ ನಿನ್ನ.
ನಿನ್ನ ಆ ವೈಯಾರಕೆ ಮಂಕಾಗಿದೆ ಮನ.
ಎಲ್ಲ ಸಲವೂ ಕಾಣುತಿರುವೆ ನೀ ವಿಭಿನ್ನ.
ಎಷ್ಟು ಸೋಜಿಗವಲ್ಲವೇ ಓ ಚಿನ್ನ?

ನಿನ್ನ ಲಾವಣ್ಯಕೆ ಬೇಡ ಮತ್ಯಾರ ಹೋಲಿಕೆ.
ದೇವರೇ ತೀಡಿರುವ ನಿನ್ನ ಓ ಬಾಲಿಕೆ.
ನಯನಗಳ ತೇಜಸ್ಸು ದೇವತೆಯ ಕಾಣಿಕೆ.
ಮಾರುಹೋದವರಿಲ್ಲ ನಿನ್ನ ಆ ನೋಟಕೆ,

ಎಂದಿನಂತೆ ಮೆಲ್ಲಗೆ ಮುಂಗುರುಳ ಸರಿಸಿ,
ಕೆಣಕದಿರು ನನ್ನ ಮುದ್ದು ಮನದರಸಿ.
ಅಂದು ನೀ ಛೇಡಿಸಿ ಹರಡಿದ ಪ್ರೀತಿ ಅಲೆಗಳು,
ಇಂದಿಗೂ ಬಂದು ಸೇರುತಿವೆ ಮನದ ದಡವನು.

ಮಾತೇ ಒದಗದು ನಿನ್ನನು ನೋಡಿ,
ರೂಪವು ನಿನ್ನದು ಮಾಡಿದೆ ಮೋಡಿ.
ಮೌನದಿ ನಿಂತೆಯಾ ಮನವ ಕದಡಿ,
ಆಶಿಸು ಕುದುರಲು ನಮ್ಮೀಜೋಡಿ.
                                             - ವಿ.ಬಿ.ಜಿ

2.

ಆತ್ಮದನುಭವವುಳ್ಳ 
ಮನುಜರಾರಿಲಿಲ್ಲಿ,
ಮನುಷ್ಯನನುಭವವುಳ್ಳ
 ಆತ್ಮಗಳೇ ಎಲ್ಲೆಲ್ಲಿ!
                                                                     - ಎಮ್ಮೆಚ್ಚೆ 

ವಿಸ್ತೃತ 
   ಪಾಪ, ಪುಣ್ಯ, ಸ್ವರ್ಗ, ನರಕ, ಆತ್ಮ, ಪರಮಾತ್ಮ ಅನ್ನುತ್ತೇವೆಯೇ ಹೊರತು ಯಾರಿಗೂ ಯಾವುದೇ ತರಹದ ಸ್ವಂತ ಅನುಭವಗಳಿಲ್ಲ. ನಾವು ಮನುಷ್ಯರಾಗಿ ಭೂಮಿಯ ಮೇಲೆ ಅವತರಿಸಿರುವುದರಿಂದ ಕೇವಲ ಮಾನವರಿಗಾಗುವ ಅನುಭವಗಳು ನಮಗಾಗುತ್ತವೆ ಹೊರತು ನಮ್ಮ ಆತ್ಮಗಳ ಅನುಭವಗಳಲ್ಲ. ಆತ್ಮಾನುಭವಗಳನ್ನು ಮರಣಿಸಿದ ನಂತರವೇ ತಿಳಿದುಕೊಳ್ಳಬೇಕು. ಎಷ್ಟೋ ಜನರು ಆತ್ಮಾನುಭವಗಳನ್ನು ಪಡೆದುಕೊಳ್ಳುವುದಕ್ಕೋಸ್ಕರ ಏನೆಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ. ಆಧ್ಯಾತ್ಮವಾದಿ ಆಗಿದ್ದಾರೆ. ಆತ್ಮಾನುಭವ ಪಡೆದಂತೆ ಎಂದು ಕೆಲವರು ತಿಳಿದಿದ್ದಾರೆ. 
   ಮಾನವರಾಗಿ ಹುಟ್ಟಿದ ನಂತರ ಜೀವಿಸುವದಕ್ಕಾಗಿ ನಾನಾ ತರಹದ ಸರ್ಕಸ್ಗಳನ್ನು ಮಾಡುತ್ತೇವೆ. ಅನೇಕ ರೀತಿಯ ಒಳ್ಳೆಯ ಕೆಟ್ಟ ಎಲ್ಲ ರೀತಿಯ ಅನುಭವಗಳನ್ನು ಪಡೆಯುತ್ತಾ ಕಾಲಕ್ರಮಕ್ಕನುಗುಣವಾಗಿ ಒಳಿತೊಂದಿಗೆ ಜೀವಿಸುತ್ತಾ ಬಂದಿದ್ದೇವೆ. 
   ಸಾಮಾನ್ಯವಾಗಿ ಮನುಷ್ಯರು ಸತ್ತ ನಂತರ ಎಲ್ಲಿ ಹೋಗುತ್ತಾರೆ?, ಏನಾಗುತ್ತಾರೆ? ಎನ್ನುವ ಕಲ್ಪನೆಗಳು ಎಲ್ಲರಲ್ಲೂ ಒಂದೇ ಇರುವದಿಲ್ಲ. ಕೆಲವುರು ಮನುಷ್ಯರು ಸತ್ತ ನಂತರ ತಮ್ಮ  ದೇಹವನ್ನು ತ್ಯಜಿಸುತ್ತಾರೇಯೇ ಹೊರತು ತಮ್ಮ ಆತ್ಮವನ್ನಲ್ಲ, ಅದು ಬೇರೆ ದೇಹದೊಂದಿಗೆ ಜನ್ಮಿಸಿ ಬರುತ್ತದೆಂದು ಧರ್ಮವಾದಿಗಳು ಹೇಳುತ್ತಾ ಸ್ವರ್ಗ-ನರಕ ಹಾಗು ಏಳು ಜನ್ಮಗಳ ನಿರ್ಧಿಷ್ಟ ಗುರಿಗಳನ್ನು ಹೇರಿಕೊಂಡಿದ್ದಾರೆ. ಮತ್ತೆ ಕೆಲವರು ಎಲ್ಲಾ ಊಹಾಪೋಹಗಳು ಸತ್ತ ನಂತರ ಅಸ್ತಿತ್ವ ಮುಗಿಯಿತು ಅಷ್ಟೇ, ಉಳಿದಿದ್ದು ಬೂದಿ ಮಾತ್ರ ಎನ್ನುತ್ತಾರೆ. ವೈಜ್ಞಾನಿಕತೆಯತ್ತ ವಾಲುತ್ತಾರೆ ಯಾರಿಗೂ ನಿರ್ದಿಷ್ಟತೆ ಇಲ್ಲ. 

3.
ನನ್ನನೇ ಆಯ್ದುಕೋ, ಪ್ರೀತಿಯ ಗೆಲ್ಲಿಕೋ
ಮನಸಲುದಿಸೋ ಪ್ರಶ್ನೆಗೆ ನನ್ನನೇ ಬರೆದುಕೋ
ನನ್ನೆದೆಯ ಒಳಮಾತು ಮುಟ್ಟಾಯ್ತು ನಿನ್ನೆದೆ
ಮುಟ್ಟಿದ ಮಾತು ಆಳಕೆ ತಟ್ಟಲಿಲ್ಲವೇ?

ಬಿಡಿಸದ ಒಗಟೇನಲ್ಲ, ತಿಳಿಯದ ಲಿಪಿಯೇನಲ್ಲ!
ಆದರೂ ಕಾಡಿಸುವೆ, ಎಲೆ ಸೋಜಿಗವೇ?
ನನ್ನ ಬಹುಆಯ್ಕೆ ಪ್ರಶ್ನೆಯ ಉತ್ತರವು ನೀನೇನೆ
ನಿನ್ನ ವಿವರಣೆಯ ಉತ್ತರ ನಾನಾಗೋ ಆಸೆ

"ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?"
ಮನವ ನಂಬುತಲಿ ತುಂಬು ಉತ್ತರವ
ನಿನ್ನ ಹಾಳೆ, ನಿನ್ನ ಜೀವನದಾರಿ
ಕೈಗೊಳ್ಳು ನಿರ್ಣಯವ ನಿನ್ನುಸಿರ ಹಂಗಿನಲಿ

ಸ್ವಚ್ಛಂದ ಆಕಾಶ, ಹಕ್ಕಿಗಳು ನಾವಿಲ್ಲಿ
ದೇವರನು ಮೆಚ್ಚಿಸುವುದಿದೆ ಚಿಲಿಪಿಲಿ ಸದ್ದಲಿ
ಹದ್ದು-ಕಾಗೆಗಳ ಅಬ್ಬರಕೆ ಮೈಮರೆಯದೇ
ವರಿಸು ಚೈತ್ರದ ಇಂಪಿಸುವ ಕೋಗಿಲೆಯ
                                                           - ವಿ.ಬಿ.ಜಿ

ಪರಿಚಯ 

ವಿಶಾಲ್ ಬಿ ಗರೂರ್, ಇವರು 23 ವರ್ಷದ ಯುವ ಬರಹಗಾರರಾಗಿದ್ದು, ತಮ್ಮ ಇಂಜಿನಿಯರಿಂಗ್ ವ್ಯಾಸಂಗವನ್ನುಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಪೂರ್ಣಗೊಳಿಸಿದ್ದಾರೆ. ಕವಿತೆ ಕವನಗಳನ್ನು ಬರಿಯುವುದು ಇವರ ಹವ್ಯಾಸ. ಇವರು ಖ್ಯಾತ ಬರಹಗಾರರಾದ (ಡಿ.ವಿ.ಜಿ) ಡಿ.ವಿ.ಗುಂಡಪ್ಪ ಅವರಿಂದ ಪ್ರೇರಿತರಾಗಿ ತಮ್ಮ ಕವನಗಳನ್ನು ವಿ.ಬಿ.ಜಿ ಹೆಸರಿನ ಅಡಿಯಲ್ಲಿ ಬರಿಯುತ್ತಾರೆ.  ಇವರು ಅತ್ಯುನ್ನತ ಬರಹಗಾರರಾಗಿ ಹೊರಹೊಮ್ಮಲಿ ಎಂದು ಆಶಿಸುತ್ತಾ, ಈ ಹೊಸ ಪ್ರತಿಭೆಗೆ ನಿಮ್ಮೆಲ್ಲರ ಪ್ರೀತಿ ಮತ್ತು ಪ್ರೋತ್ಸಾಹದೊಂದಿಗೆ ಹಾರೈಸಲು ಎಲ್ಲಾ ಓದುಗರಲ್ಲೂ ವಿನಂತಿ. 


Comments

Popular Posts