1.
ಮಾಡಿದ ಆ ತಪ್ಪು
ಜೀವನ ಪ್ರಗತಿ ಅಂಶ,
ಘಟಿಸಿದ ಆ ಒಪ್ಪು
ತಪ್ಪಾಗಿರಲೂಬಹುದಾದ ಸಾರಾಂಶ!
- ಎಮ್ಮೆಚ್ಚೆ
ವಿಸ್ತೃತ
ಪ್ರತಿಯೊಬ್ಬರೂ ಚಿಕ್ಕವರಾಗಿದ್ದಾಗ ತಮ್ಮ ಜೀವನದಲ್ಲಿ ಒಂದಿಲ್ಲಾ ಒಂದು ರೀತಿಯ ಚಿಕ್ಕ ಪುಟ್ಟ ತಪ್ಪುಗಳನ್ನು ಮಾಡಿಯೇ ಇರುತ್ತಾರೆ. ಈ ರೀತಿಯ ತಪ್ಪುಗಳನ್ನು ಮಾಡಿಯೇ ಸರಿಪಡಿಸಿಕೊಳ್ಳುತ್ತಾರೆ. ಹಿರಿಯರು ಅಂತಹ ತಪ್ಪುಗಳನ್ನು ತಿಳುವಳಿಕೆ ಹೇಳಿ ತಿದ್ದುತ್ತಾರೆ. ಅವುಗಳಿಂದ ನಾವುಗಳು ಪಾಠ ಕಲಿತು ಮತ್ತೆ ಅಂತಹ ಯಾವುದೇ ತಪ್ಪುಗಳು ಜರುಗದ ಹಾಗೆ ನೋಡಿಕೊಳ್ಳಬೇಕು.
ಮನುಷ್ಯಕುಲ ಹುಟ್ಟಿದಾಗಿನಿಂದ ಅನೇಕ ತಪ್ಪುಗಳನ್ನು ಮಾಡುತ್ತಲೇ ಸರಿಯಾದುದನ್ನು ಸಾಧಿಸುತ್ತ ಬಂದಿರುತ್ತಾರೆ. ಇದು ಮಾನವ ಜೀವಿಗಳ ನಿರಂತರ ಸಾಮಾಜಿಕ ಪ್ರಕ್ರಿಯೆಯಾಗಿದ್ದು ಪ್ರಗತಿಪರದಾಯಕವಾಗಿರುತ್ತದೆ.
ಅದೇ ತೆರನಾಗಿ ನಾವು ಜೀವಿಸಬೇಕಾದರೆ ಜೀವನದಲ್ಲಿ ನಮ್ಮದೇ ಆದ ಸ್ವಂತ ಸಾಕಷ್ಟು ಸರಿಯಾದ ನಿರ್ಣಯಗಳನ್ನು ತಗೆದುಕೊಳ್ಳಬೇಕಾಗುತ್ತದೆ. ಅಂತಹ ನಿರ್ಧಾರಗಳು ಆ ಸಂದರ್ಭಗಳಲ್ಲಿ ಸರಿಯಾದವುಗಳೇ ಎಂದು ಕಂಡು ಬಂದರೂ ಕಾಲಾಂತರದಲ್ಲಿ ತಪ್ಪುಗಳಾಗಿರಲೂ ಬಹುದಾಗಿರುತ್ತದೆ. ತಗೆದುಕೊಂಡ ಆ ನಿರ್ಧಾರಗಳು ಸರ್ವಕಾಲಿಕ ಸರಿಯಾಗಿಯೇ ಇರುತ್ತವೆಂದು ಹೇಳಲು ಬರುವದಿಲ್ಲ. ಆದ್ದರಿಂದ ಏನಾದರೂ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದರೆ ಮುಂದಾಗಬಹುದಾದ ಸರಿಯಾದ ಎಲ್ಲ ಪರಿಣಾಮಗಳನ್ನು ಗಣನೆಗೆ ತೆಗೆದುಕೊಂಡು ನಿರ್ಣಯಿಸಬೇಕಾಗುತ್ತದೆ. ಎಂದೂ ದುಡುಕಿನಿಂದ ಕೂಡಿದ ನಿರ್ಧಾರ ಸರಿಯಾಗಿರಲಾರದು.
2.
ಸತ್ಯವಲ್ಲ ನೀ ಚಿತ್ರದ ಹೂ
ಅತ್ತಲೇ ಸೆಳೆವೆ ಈ ದುಂಬಿಯ ಚಿತ್ತ
ನಿಜವೆಂದು ನಂಬಿ ಮಕರಂದದ ನೆಪದಲಿ
ನಾ ಕೊಟ್ಟ ಮುತ್ತುಗಳ ಲೆಕ್ಕ
ಸಿಕ್ಕಲೇ ಇಲ್ಲ ನಿನಗೆ ಪಕ್ಕಾ!
ಹಸಿವು, ನೀರಡಿಕೆ ನಿನಗಿಲ್ಲ
ಸ್ಪಂದಿಸುವ ಮನಸು ಇಲ್ಲವೇ ಇಲ್ಲ
ಛಲ ಹೊತ್ತು ನಡೆವ ನನ್ನ ನಿಶ್ಚಲಗೊಳಿಸಿ
ನಗುವೆ ಏಕೆ ನಿರ್ಜೀವ ಮುಗುಳು ನಗೆ
ಈ ಜೀವದ ಜೊತೆ ನಿನ್ನ ಸರಸವೇನು?
ಕಾಲಚಕ್ರದಲಿ ಯಾವುದೂ ಸ್ಥಿರವಲ್ಲ
ನಿನಗೂ ಬಂದೇತೀರುವದು ಒಂದೊಮ್ಮೆ ಅಳಿವು!
ಮನಸೆಳೆವ ಬಣ್ಣ ಮಾಸೀತು ಪಕಳೆಗಳ ಕಟ್ಟು ಬಿಚ್ಚೀತು
ಇದ ಹೇಳಿದರೂ ನಿನಗೆ ತಿಳಿಯುವುದಿಲ್ಲ
ಏಕೆಂದರೆ ನೀ ಸತ್ಯ ಶಾಶ್ವತವಲ್ಲದ ಚಿತ್ರದ ಹೂ!
- ಎಮ್ಮೆಚ್ಚೆ
- ಎಮ್ಮೆಚ್ಚೆ

Comments
Post a Comment
Liked the post? Don't forget to tell us, do comment.