1.

ಸಂಗದಲಿ ಸಾಗುವದು ವಿಜೃಂಬಿತ ಮಾತು
ಭಂಗದಲಿ ಹೊಗುವದು ವೈಶಮ್ಯದ ಹೇತು,
ಸಂಗ ಭಂಗಗಳ ವಿನಾ ಗೊಂದಲಗಳೇಕೆ
ವ್ಯಂಗ್ಯ ಗೊಳ್ಳದೆ ಬದುಕುವದು ಹಿತ ಜೋಕೆ
                                                       - ಎಮ್ಮೆಚ್ಚೆ

ವಿಸ್ತೃತ
ಸಮಾನ ವಯಸ್ಸಿನವರ, ಮನಸ್ಸಿನವರ  ಗೆಳೆತನದಲ್ಲಿ ಮನಸು ಉಲ್ಲಸಿತಗೊಳ್ಳುತ್ತದೆ. ನಮ್ಮ ನಮ್ಮ ಅನುಭವಗಳನ್ನು ಯಥಾವತ್ತಾಗಿ ಹಂಚಿಕೊಂಡು ಖುಷಿ ಪಡುತ್ತೇವೆ. ಒಂದೊಮ್ಮೆ ನಮಗೆ ಅಸಹ್ಯ ಭರಿತ ಅನುಭವವಾಗಿದ್ದರೂ ಎಲ್ಲ ಆತ್ಮೀಯ ಗೆಳೆಯರೊಂದಿಗೆ ಯಾವುದೇ ಸಂಕೋಚಪಡದೆ ಹಂಚಿಕೊಃಡು ಭರ್ಜರಿ ವೈಭವೀಕರಿಸಿ ಹೇಳಿಕೊಳ್ಳುತ್ತೇವೆ. ಗೆಳೆತನದಲ್ಲಿ ಅಭಿಮಾನವನ್ನು ಕಳೆದುಕೊಂಡವರಾಗುತ್ತೇವೆ.
      ಅದೇ ನಮಗಾಗದ ವೈರಿಗಳ ಎದುರು ಹುಸಿತನದಿಂದ ಎಲ್ಲವನ್ನೂ ಗೌಪ್ಯಗೊಳಿಸುವುದರ ಜೊತೆಗೆ ಬಿಗುಮಾನದಿಂದ ಇರಲು ಬಯಸುತ್ತೇವೆ. ದ್ವೇಷವಿದ್ದಲ್ಲಿ ನೈಜತೆ ಮಾಯವಾಗಿ ಹುಸಿತನವೇ ನಮ್ಮನ್ನಾಳುತ್ತದೆ. ಇದು ಅನಿವಾರ್ಯವೂ ಹೌದು. ಏಕೆಂದರೆ ವೈರಿಗಳೆದುರು ನಮ್ಮದೇ ಗರಿಮೆ ಇರಬೇಕೆಂದು ಬಯಸುತ್ತೇವೆ. ಒಣ ಹೆಮ್ಮಸುತನ ಪಟ್ಟುಕೊಳ್ಳುತ್ತೇವೆ.
      ಗೆಳೆತನದಲ್ಲಾಡುವ ವಿಜೃಂಬಿತ ಮಾತುಗಳೇ ಆಗಿರಲಿ, ದ್ವೇಶದಲ್ಲಾಡುವ ಉದ್ದೇಶ ಪೂರಿತ ಮೊಸದ ಮಾತುಗಳೇ ಇರಲಿ ಇವುಗಳು ಯಾವಾಗಲಾದರೂ ನಮ್ಮ ಜೀವನದಲ್ಲಿ ಕುಂದನ್ನುಂಟು ಮಾಡುವಂತಹುಗಳೇ ಆಗಿರುತ್ತವೆ. ನಾವು ದುಡುಕಿನಿಂದ ನಮ್ಮ ವ್ಯಕ್ತಿತ್ವಗಳಿಗೆ ನಮಗೆ ತಿಳಿಯದಂತೆ ತೊಂದರೆಮಾಡಿಕೊಳ್ಳುತ್ತೇವೆ. ಆದ್ದರಿಂದ ನಮ್ಮ ಮನಸನ್ನು ನಮ್ಮ ಬುದ್ದಿಗೂ ಮೀರಿ ಹರಿಬಿಡಬಾರದು.
      ಇಂತಹ ಬಾಲಿಶತನದ ಮಾತುಗಳನ್ನು ಕೇಳಿ ಪರರು, ತಾತ್ಕಾಲಿಕವಾಗಿ ನಮ್ಮ ಎದುರು ಹೆದರಿಕೆಯಿಂದ ಸುಮ್ಮನಿದ್ದರೂ ಸಹ ನಾವು ಇರದಿದ್ದಾಗ ಅಥವಾ ನಾವು ನಿರ್ಗಮಿಸಿದಾಗ ನಮ್ಮನ್ನು ಅಪಹಾಸ್ಯ ಮಾಡಿಬಿಡುತ್ತಾರೆ. ಇಂಥಹ ಅಪಹಾಸ್ಯಗಳಿಗೆ ಒಳಪಡಬಾರದೆಂದರೆ ನಾವು ನಮ್ಮ ಭಾವನೆಗಳನು ವಿನಾಕಾರಣ ಹರಿಬಿಡುವದನ್ನು ಬಿಡಬೇಕು. ಬುದ್ದಿಯುತವಾಗಿ ನೈಜ ರೀತಿಯಿಂದ ಬದುಕುವದನ್ನು ಕಲಿತುಕೊಳ್ಳಬೇಕು. ಪರರ ಅಪಹಾಸ್ಯದ ವಸ್ತುವಾಗುವದನ್ನು ತಪ್ಪಿಸಿಕೊಳ್ಳಬೇಕು. ಹೀಗೆ ಬದುಕುವುದರಿಂದ ನಮ್ಮ ವಯಕ್ತಿಕ ವ್ಯಕ್ತಿತ್ವಕ್ಕೆ ಯಾವುದೇ ತೊಂದರೆ ಉಂಟಾಗುವದಿಲ್ಲ. 

2.

ಯಾವುದರೊಡೆತನ ಬಯಸದ ಕಬೀರ
ನಡು ಬೀದಿಯಲ್ಲೂ ಬದುಕಿದ ಬರಪೂರ,
ಬಯಕೆಯಲೇ ಬೆಂಡಾದ ಕುಬೇರ
ಪಡೆಯಲಿಲ್ಲ ಸುಖವದು ಅಚ್ಚೇರ!
                                                - ಎಮ್ಮೆಚ್ಚೆ

ವಿಸ್ತೃತ 
ಹುಟ್ಟಿದ ಮನುಷ್ಯರು ಹುಸಿ ಭ್ರಮೆಗೆ ಒಳಗಾಗಿ ತಾನು ಸಿರಿವಂತ ಅನ್ನಿಸಿಕೊಳ್ಳಬೇಕೆಂದು ಬಯಸುತ್ತಾನೆ. ಹುಟ್ಟಿದವರು ಪ್ರತಿಯೊಬ್ಬರೂ ಸಾಯಲೇಬೇಕು, ಸತ್ತ ನಂತರ ಯಾರೂ ತಮ್ಮೊಂದಿಗೆ ಏನೇನನ್ನೊ ತೆಗೆದುಕೊಂಡು ಹೋಗುವದಿಲ್ಲ ಎನ್ನುವ ಸತ್ಯ ತಿಳಿದಿದ್ದರೂ ಸಹ ಎಲ್ಲಾ ನೈಸರ್ಗಿಕ ಸ್ವತ್ತುಗಳೂ ತನ್ನದಾಗಬೇಕು,ಎಲ್ಲದಕ್ಕೂ ತಾನೇ ಮಾಲೀಕನೆನಿಸಿಕೊಳ್ಳಬೇಕೆಂದು ಬಯಸುತ್ತಾನೆ. ಎಲ್ಲಾ ಸ್ವತ್ತು ತನ್ನ ಒಡೆತನಕ್ಕೇ ಒಳಪಡಬೇಕೆಂದು ಬಯಸುತ್ತಾನೆ. ಅದಕ್ಕಾಗಿ ತನ್ನ ಅಮೂಲ್ಯ ಜೀವನ ಬಲಿಕೊಟ್ಟು ಪಡಬಾರದ ಪರಿಪಾಟಕ್ಕೆ ಒಳಗಾಗುತ್ತಾನೆ. ಇದನ್ನು ಇತಿಹಾಸ ನೊಡಿ ತಿಳಿದುಕೊಳ್ಳುವದು ಅವಶ್ಯವಾಗಿರುತ್ತದೆ. ಇಡೀ ಜಗತ್ತಿಗೇ ತನ್ನ ಒಡೆತನ ಸಾಧಿಸಬೇಕೆಂದು ದೊಡ್ಡ ಶೂರದಿಶೂರ, ವೀರಾಧಿ ವೀರ ರಾಜ ಮಹಾರಾಜರುಗಳೆಲ್ಲ ಕೊನೆಗೆ ಸಾಧ್ಯವಾಗದೆ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ. ಕೊನೆಗಳಿಗೆ ಅರ್ಥಮಾಡಿಕೊಂಡವರೂ ಇದ್ದಾರೆ. ಆದರೆ ನಿಸರ್ಗ ತನ್ನತನವನ್ನು ಕಾಯ್ದುಕೊಂಡೇ ಹೊರಟಿದೆ. ಇಂದು ನನ್ನದಾದ ಸ್ವತ್ತು ನಾಳೆ ಇನ್ನಾರದ್ದೊ ಆಗಿರುತ್ತದೆ. ಇದನರಿತ ಎಷ್ಟೊ ಜನ ಮಹನೀಯರುಗಳು ತಮ್ಮ ಸಕಲ ಐಶ್ವರ್ಯಗಳನ್ನೂ ಸಮಾಜಕ್ಕೇ ಬಿಟ್ಟುಕೊಟ್ಟು ದೇವರುಗಳೇ ಆಗಿದ್ದಾರೆ. ಅಂಥವರಲ್ಲಿ ಸಂತ ಕಬೀರದಾಸರೂ ಒಬ್ಬರು. ಒಯ್ಯದ ಸ್ವತ್ತಿಗೆ ಒಡೆಯರಾಗಬೇಕೆಂದರೆ ಪಡಬಾರದ ತೊಂದರೆ ದಾಯಕ ಬಾಧ್ಯತೆಗಳನ್ನು ಎದುರಿಸಬೇಕಾಗುತ್ತದೆ಼. ಯಾವುದೇ ತರಹದ ತೊಂದರೆಗಳಿರದೆ ನೆಮ್ಮದಿಯುತವಾಗಿ ಇರಬೇಕೆಂದರೆ, ಯಾವ ಸ್ವತ್ತಿನ ಬಯಕೆಗಳನಳಿದು ಪಾರಮಾರ್ಥಕತೆಗೆ ಹೊಗಬೇಕು. ಬರುವಾಗ ಬೆತ್ತಲೆ, ಹೊಗುವಾಗಲೂ ಬೆತ್ತಲೆ ಎಂದು ತಿಳಿಯದೆ ಕೆಲಜನರು ಇಲ್ಲಸಲ್ಲದ ಬಯಕೆಗಳಲ್ಲಿ ಬಸವಳಿದು ಇದ್ದುದನ್ನೂ ಅನುಭವಿಸದೆ ಪರರ ಪಾಲುಮಾಡಿ ತಮ್ಮೊಂದಿಗೆ ಏನೂ ಒಯ್ಯದೇ ನಿರ್ಗಮಿಸುತ್ತಾರೆ಼. 
          ಆದ್ದರಿಂದ ಸಂಸಾರಿಕ ವ್ಯಕ್ತಿಗಳಾದ ನಾವು ಇಲ್ಲ ಸಲ್ಲದ್ದಕ್ಕೆ ದುರಾಸೆ ಪಡದೆ ಇದ್ದುದನ್ನೇ ಸರಿಯಾಗಿ ಬಳಸಿಕೊಂಡು ನೆಮ್ಮದಿಯುತವಾಗಿ ಜೀವಿಸುವದು ಶ್ರೇಷ್ಠ ಮಟ್ಟದ್ದಾಗಿರುತ್ತದೆ.

Comments

Popular Posts