1.
ಸುರತನಕೆ ಗಳಿಗೆಗಳಾರು
ಕೇಳುವದು ಯಾರು,
ಅಸುರತನಕೆ ನೂರಾರು
ಬೆಂಬಿಡದವರಾರು!
- ಎಮ್ಮೆಚ್ಚೆ
ವಿಸ್ತೃತ
ಮನುಷ್ಯ ದೈವೀ ಸ್ವರೂಪವನ್ನು ಪಡೆದುಕೊಳ್ಳಬೇಕೆಂದರೆ, ಅರಿಷಡ್ ವರ್ಗಗಳಾದ ಕಾಮ, ಕ್ರೊಧ, ಲೋಭ, ಮದ, ಮತ್ಸರಗಳನ್ನು ಕಳೆದುಕೊಳ್ಳಬೇಕು. ಇವು ಕೇವಲ ಆರು ಒಳ್ಳೆಯ ತತ್ವಗಳನ್ನು ಅಳಿದವನು ದೇವಸನ್ನಿಧಿಗೆ ಸೇರುತ್ತಾನೆ. ದೈವೀ ಸ್ವರೂಪ ಪಡೆದುಕೊಂಡು ತಾನೇ ದೇವರಾಗುತ್ತಾರೆ. ಆದರೆ ಮನಸು ಮರ್ಕಟದಂತೆ, ಮೊಸ, ವಂಚನೆ, ಸ್ವಾರ್ಥ ಹೀಗೆ ನೂರಾರು ಅವಗುಣಗಳನ್ನು ಅಳವಡಿಸಿಕೊಂಡು ರಾಕ್ಷಸ ಸ್ವರೂಪವನ್ನು ಪಡೆದುಕೊಳ್ಳುತ್ತಾರೆ. ಇವುಗಳಿಂದ ತೊಂದರೆ ಎಂದು ತಿಳಿದೂ ಅವುಗಳ ಬೆನ್ನುಹತ್ತಿ ರಕ್ಕಸತನವನ್ನು ಬೆಳೆಸಿಕೊಳ್ಳುತ್ತಾರೆ. ಮನುಷ್ಯರು ಅತೀ ಸರಳವಾದ ಕೇವಲ ಕೆಲವು ತತ್ವಗಳಿಂದ ದೈವೀ ಸ್ವರೂಪ ಪಡೆಯುವದನ್ನು ಬಿಟ್ಟು ಮನಸಿನ ವಾಂಚೆಗಳಿಗೆ ಬಲಿಯಾಗಿ ನೂರಾರು ತೊಂದರೆ ದಾಯಕ ತತ್ವಗಳನ್ನು ಅಳವಡಿಸಿಕೊಂಡು ರಾಕ್ಷಸತ್ವವನ್ನು ಪಡೆದುಕೊಳ್ಳಲು ಹವನಿಸುತ್ತಾರೆ. ಇಂಥ ಕೆಟ್ಟ ಗುಣಗಳಿಂದ ಪರರಿಗೆ ಸಾಮಾಜಿಕವಾಗಿ ಬಹಳ ತೊಂದರೆ ಯಾಗುತ್ತದೆಂದು ತಿಳಿದುಕೊಳ್ಳುವುದೇ ಇಲ್ಲ. ಹೇಗಾದರೂ ಮಾಡಿ, ಯಾವ ಮಾರ್ಗದಿಂದಲಾದರೂ ಸರಿ ಲಾಭವನ್ನು ಪಡೆದುಕೊಂಡು ಆರಾಮವಾಗಿರಬೇಕೆಂದು ಬಯಸುತ್ತಾರೆ. ಇದರಿಂದ ಪರರ ತೊಂದರೆಯ ಜೊತೆ ತಾವೂ ತೊಂದರೆ ಪಟ್ಟುಕೊಳ್ಳುತ್ತಾರೆ ಅನ್ನುವದನ್ನೂ ಮರೆತಿರುತ್ತಾರೆ. ಸ್ವಸ್ಥ ಸಮಾಜವನ್ನು ಕಲುಸಿತಗೊಳಿಸಿ ವಿಕ್ರುತತೆಯಿಂದ ಮೆರೆಯುತ್ತಾರೆ.
ಆದ್ದರಿಂದ ಇಲ್ಲಸಲ್ಲದ ನೂರಾರು ಗುಣಗಳಿಂದ ರಾಕ್ಷಸ ಸ್ವಭಾವ ಬೆಳೆಸಿಕೊಳ್ಳುವದಕ್ಕಿಂತ ಕೇವಲ ಕೆಲ ಒಳ್ಳೆಯ ತತ್ವಗಳನ್ನು ಮೈಗೂಡಿಸಿಕೊಂಡು ದೈವತ್ವದೆಡೆಗೆ ಸಾಗುವುದರೊಂದಿಗೆ ಸ್ವಸ್ಥ ಸಮಾಜ ನಿರ್ಮಾಣ ಮಾಡುವದು ಎಲ್ಲರ ಕರ್ತವ್ಯವಾಗಿರುತ್ತದೆ.
2.
ಗುಡಿಗೆ ಹೋಗುವವರೆದೆಯಲಿ
ಗೊಪುರೆತ್ತರ ತರತರದ ನೋವು,
ಬಿದ್ದಿರುವ ಸುಖದ ಭಿಕಾರಿ ಮೂಲೆಯಲಿ
ಅದು ದೇವರಿಗೇ ದೊಡ್ಡ ತಲೆನೋವು!
- ಎಮ್ಮೆಚ್ಚೆ
ವಿಸ್ತೃತ
ಸಂಕಟ ಬಂದಾಗ ವೆಂಕಟ ರಮಣ ಅನ್ನುವಂತೆ ಸಾಮಾನ್ಯವಾಗಿ ಎಲ್ಲಜನರೂ, ತಮ್ಮ ಮನದಾಸೆ ಈಡೇರಿಸಿಕೊಳ್ಳಲು ಭಕ್ತಿ ಮಾರ್ಗದೆಡೆ ವಾಲುತ್ತಾರೆ. ನಿಸ್ವಾರ್ಥತೆಯಿಂದ ದೇವರ ಭಕ್ತಿಯುಳ್ಳವರ ವಿರಳತೆ ಎದ್ದು ಕಾಣುತ್ತದೆ. ಭಕ್ತಿಯು ವ್ಯಾಪಾರಿಕರಣಗೊಳ್ಳುವುದರ ಮುಖಾಂತರ ಜನ ಪಾಪ ಪರಿಹಾರಗಳ ಭಯದಲ್ಲಿ ಬದುಕುವಂತೆ ಮಾಡುವುದರೊಂದಿಗೆ ವೈಭವೀಕರಣ ಗೊಂಡವು. ಧಾರ್ಮಿಕ ತಾನಗಳು ವಂಚನೆ,ಕಾನೂನು ನುಸುಳುವಿಕೆಯ ತಾನಗಳಾದವು. ಜೊತೆಗೆ ಅಮಾಯಕರ ನೋವು ಶಮನಕ ಕೇಂದ್ರಗಳೂ ಆದವು. ದೇವರ ಗೊಪುರದ ಕಳಸಕ್ಕಿಂತ ಎತ್ತರದಲ್ಲಿ ಮನುಷ್ಯರು ವಾಸಿಸುವ ಮನೆ ಕಟ್ಟಬಾರದು ಎಂದು ಅಘೋಷಿತ ಆಚರಣೆಯೂ ಇದೆ. ಜೊತೆಗೆ ಇದರ ಸಮರ್ಥನೆಗಾಗಿ, ಊರ ದೇವರ ಗೋಪುರದ ಕಳಸಗಳನ್ನು ವೈಜ್ಞನಿಕ ಕಾಂತೀಯ ಪ್ರೇರಣೆಗನುಗುಣವಾಗಿ ನಿರ್ಮಾಣ ಮಾಡಿರುತ್ತಾರೆ. ಇದಕಿಂತ ಎತ್ತರದಲ್ಲಿ ಮಾನವ ವಾಸಿಸಿದರೆ ಆರೋಗ್ಯಪೀಡಿತನಾಗುತ್ತಾನೆ. ಅದಕ್ಕೇ ನಾವು ದೇವರು ಕೊಡುವ ಶಾಪ ಎನ್ನುತ್ತೇವೆಂದು ಕೆಲವರ ವಿತಂಡ ವಾದಗಳೂ ಇವೆ. ಹೀಗೆ ಏನೇ ಹೇಳಿದರೂ ಸಹ ಜನರು ದಿನಂಪ್ರತಿ ತನ್ನ ವಾಸಸ್ಥಾನ ಹೆಚ್ಚು ಎತ್ತರದಲಿರಬೇಕೆಂದು ಹಂಬಲಿಸುತ್ತಾರೆ. ಪೈಪೋಟಿಗಿಳಿದು ಅನ್ಯ ಗ್ರಹಗಳಲಿ ಅನಂತತೆಯಲಿ ವಾಸಿಸುವದನ್ನೂ ಸಾಧ್ಯಗೊಳಿಸಿಕೊಳ್ಳುತ್ತಿದ್ದಾನೆ.
ಒಂದೆಡೆ ಮಾನವ ತನ್ನ ಬುದ್ಧಿಮತ್ತೆಯೀಂದ ಏನೆಲ್ಲ ನಿಸರ್ಗವನ್ನು ತನ್ನ ಕೈವಶ ಮಾಡಿಕೊಳ್ಳುತ್ತಿರುವ ಕಾಲದಲ್ಲೂ ಎಷ್ಟೊ ಜನರು ತಮ್ಮ ಜೀವನ ಸಾಗಿಸಲು ಮೂಲಭೂತ ಅವಶ್ಯಕತೆಗಳಿಗಾಗಿ ಪರಿತಪಿಸುತ್ತಿದ್ದಾರೆ. ವಾಸಿಸಲು ಸೂರುಗಳಿಲ್ಲದೆ ಅನೇಕ ಜನ ಗುಡಿ ಗುಂಡಾರಗಳಲ್ಲಿಯೇ ಆಶ್ರಯಪಡೆದು ಜೀವನೋತ್ಸಾಹದಲ್ಲಿ ಹಾಯಾದ ಬದುಕು ಕಟ್ಟಿಕೊಂಡಿರುತ್ತಾರೆ. ಒಂದೆಡೆ ಬದುಕಲು ಪರದಾಡುತ್ತ ಹಾಯಾಗಿರುವ ಜನ.ಇನೊಂದೆಡೆ ಬದುಕಲು ಮಿಕ್ಕಿಯೂ ಇದ್ದು ಇನ್ನೂ ಹೆಚ್ಚಾಗಲೆಂಬ ದುಗುಡತೆಯಲ್ಲಿರುವ ಜನ.ಇವರಿಬ್ಬರನ್ನೂ ನೊಡಿ ದೇವರು ನಗುತ್ತಿದ್ದಾನೆ. ಆದರೆ ತಮ್ಮ ಆದಾಯಗಳಲ್ಲಿ ಅಲ್ಪ ಭಾಗೀದಾರನಾಗುವ ದರಿದ್ರ ಕಮೀಟಿಯ ಸಿಟ್ಟಿಗೆ ಕಾರಣನಾಗಿ ಬಗಿಹರೆಯದ ಸಮಸ್ಯೆಯಾಗುತ್ತಾನೆ.
3.
ಕಾಲುಬಿಚ್ಚಿದ ಕತ್ತೆಗೆ
ತಿಂದುದೇ ಆಹಾರ,
ಮಾನವೀಯತೆ ಮರೆತವಗೆ
ಮಾಡಿದುದೇ ವ್ಯವಹಾರ!
- ಎಮ್ಮೆಚ್ಚೆ
ವಿಸ್ತೃತ
ಎಲ್ಲ ಪ್ರಾಣಿಗಳಲ್ಲಿ ಕತ್ತೆಗೆ, ಹೆಚ್ಚಿಗೆ ಭಾರ ಹೊರುವ ಜಿಗುಟುತನದ ಹೆಚ್ಚಿನ ಪಟ್ಟ. ಅದರಂತೆಯೇ ಅದರ ಮೌಡ್ಯತನವೂ ಪ್ರಸಿದ್ದಿ ಪಡೆದಿದೆ. ಕತ್ತೆಗೆ ಏನುತಿನ್ನಬೇಕು, ಏನುಬೇಡ ಎಂದು ತಿಳಿಯದೆ ಹಾಳಿ, ಹಗ್ಗ, ಹೊಲಸು ಹೀಗೆ ಏನೆಲ್ಲವನ್ನೂ ತಿಂದುಬಿಡುತ್ತದೆ. ಕಟ್ಟಿದ ಹಗ್ಗ ಬಿಚ್ಚಿದರೆ ಸಾಕು ಹೊಟ್ಟೆಯ ಪ್ರಮಾಣದ ಅರಿವೂ ಇರದಂತೆ ತಿನ್ನುತ್ತಲೇ ಇರುತ್ತದೆ.
ಬುದ್ದಿವಂತ ಪ್ರಾಣಿ ಅನ್ನಿಸಿಕೊಂಡ ಎಷ್ಟೋ ಜನರು ಇನ್ನೂ ಹೆಚ್ಚು ಗಳಿಸಬೇಕೆಂಬ ಹಪಹಪಿಯಿಂದ ಎಲ್ಲಾರಂಗದಲ್ಲಿ, ಎಷ್ಟು ಸಿಗುತ್ತದೊ ಅಷ್ಟನ್ನೂ ಯಾವ ಮಾರ್ಗದಿಂದಲಾದರೂ ಪಡೆದುಕೊಳ್ಳಲೇಬೇಕೆಂಬ ಭ್ರಮಾಧೀನತೆಗೆ ಒಳಗಾಗಿರುತ್ತಾರೆ. ಮತ್ತು ತಾವು ಮಾಡುತ್ತಿರುವುದರಲ್ಲಿ ಯಾವುದೇ ತಪ್ಪಿಲ್ಲ, ತಾವು ಮಾಡುತ್ತಿರುವುದೇ ಸರಿಯಾದುದೆಂದು ವಿನಾಕಾರಣ ವಾದಿಸುತ್ತಾರೆ. ಅಸಹಾಯಕ ಮನುಷ್ಯರನ್ನು ಕ್ಷುಲ್ಲಕತೆಯಿಂದ ನೊಡುತ್ತಾರೆ. ಅದು ಅವರವರ ಕರ್ಮವೆಂದು ಧಾರ್ಮಿಕತೆಯ ಸಬೂಬು ಬಳಸಿಕೊಳ್ಳುತ್ತಾರೆ. ಸ್ವಸ್ಥಸಮಾಜಕ್ಕೆ ಮಾರಕರಾಗುತ್ತಾರೆ. ಆದ್ದರಿಂದ ಬುದ್ಧಿವಂತ ಪ್ರಾಣಿಗಳಾದ ನಾವುಗಳು ಮೂಢ ಪ್ರಾಣಿಗಳಂತೆ ವರ್ತಿಸದೆ ತಿಳಿದು ಸಹಜೀವನ ನಡೆಸಬೇಕು.
Superb mavar
ReplyDelete