1.
ಇದ್ದ ಬುಧ್ಧಿ ತಾನದು
ಕೊಳೆತ ಗಂಧದ ಕೊರಡು,
ಹೊಮ್ಮುವದು ಸುಗಂಧವದು
ತೇಯಲುದ್ಭವದ ಕರಡು!
- ಎಮ್ಮೆಚ್ಚೆ
ವಿಸ್ತೃತ
ಗಳಿಸಿದಂತಹ ವಿಧ್ಯೆಯನ್ನು ಸರಿಯಾಗಿ ಉಪಯೋಗಿಸದಿದ್ದರೆ ಏನೂ ಉಪಯೋಗವಿರುವದಿಲ್ಲ ಅಂದರೆ ಸುಗಂಧ ಸೂಸುವ ಗಂಧದ ಕಟ್ಟಿಗೆಯನ್ನು ಉಪಯೋಗಿಸದಿದ್ದರೆ ಅದೂ ಸಹ ವ್ಯರ್ಥವಾಗಿ ಕೊಳೆತು ಹೋಗುತ್ತದೆ. ಗಂಧದ ಕಟ್ಟಿಗೆಯನ್ನು ತೇಯುತ್ತಾ ಹೋದಂತೆಲ್ಲ ಸುಗಂಧವನ್ನು ಸೂಸುತ್ತದೆ. ಅಂದರೆ ವಿದ್ಯೆಯನ್ನು ಸರಿಯಾಗಿ ಉಪಯೋಗಿಸಿದ್ದಲ್ಲಿ ಸಮಾಜ ಸಮೃದ್ಧ ಭರಿತವಾಗುತ್ತದೆ.
2.
ಹರಿದೊಗೆಯಲೇ ಹದಮಾಡಿ
ಚಟ್ಟ ಕಟ್ಟಿದ ದಾರ,
ಉಡಿ ಕಟ್ಟಿ ಬಿಗಿದ ಬಡಗಿಗದುವೆ
ಜೀವನಕ್ಕೆ ಮೂಲಾಧಾರ!
- ಎಮ್ಮೆಚ್ಚೆ
ವಿಸ್ತೃತ
ಮನುಷ್ಯರು ಸತ್ತೊಡನೆ ಅವರವರ ಮನೆಯವರು ಅವರವರ ಧರ್ಮಕ್ಕೆ ರೀತಿ ರಿವಾಜುಗಳಿಗೆ ತಕ್ಕಂತೆ ಅಂತ್ಯ ಸಂಸ್ಕಾರ ಕಾರ್ಯಕ್ರಮ ನೆರವೇರಿಸುತ್ತಾ ಬಂದಿರುತ್ತಾರೆ. ಶವವನ್ನು ಸ್ಮಶಾನಕ್ಕೆ ಸಾಗಿಸಬೇಕಾದರೆ ಅವರವರ ಪದ್ಧತಿಯಂತೆ ಶವಪೆಟ್ಟಿಗೆ, ಚಟ್ಟ ಕಟ್ಟುತ್ತಾರೆ. ಅದರಲ್ಲೂ ಹಳ್ಳಿಗಳಲ್ಲಿ ಈ ಕಾಯಕ ಮಾಡುವುದಕ್ಕಾಗಿಯೇ ಕೆಲವರು ಇರುತ್ತಾರೆ. ಅವರಿಗೆ ಆಯಗಾರರು ಎನ್ನುತ್ತಾರೆ. ಸಾಮಾನ್ಯವಾಗಿ ಆಯಗಾರರು ಬಡಿಗ ಮತ್ತು ಕಮ್ಮಾರರಾಗಿರುತ್ತಾರೆ. ಅಂದರೆ ಕಟ್ಟಿಗೆ ಕಬ್ಬಿಣದ ಕರಕುಶಲ ಕರ್ಮಿಗಳು ಆಗಿರುತ್ತಾರೆ. ಜನ್ಮದತ್ತವಾಗಿ ವಿಶೇಷ ಪರಿಣಿತಿಯನ್ನು ಪಡೆದ ಇವರು ನಿರ್ಮಿಸುವ ಹೆಣದ ಮಂಟಪ (ಚಟ್ಟ) ಕೇವಲ ಸುಡುಗಾಡು ಮುಟ್ಟುವವರೆಗೆ ಮಾತ್ರ ಉಪಯೋಗಕ್ಕೆ ಬರುವಂತಹದು, ಸುಡುಗಾಡಿಗೆ ಹೋದ ನಂತರ ಅವರೇ ಅದನ್ನು ಬಿಚ್ಚುವವರೆಂದು ತಿಳಿದು ಸಹ ಅಷ್ಟು ಗಟ್ಟಿಯಾಗಿ ಯಾವುದೇ ತರಹದ ಅವಘಡಗಳು ಜರುಗದ ರೀತಿಯಾಗಿ ವ್ಯವಸ್ಥೆ ಮಾಡಿರುತ್ತಾರೆ. ಹೆಣಕ್ಕೆ ಅಂತಿಮ ಪೂಜೆಗಳನ್ನು ಸಲ್ಲಿಸಿ ಉಡಿಯ ಸಾಮಾನುಗಳು ಅಂದರೆ ತಮ್ಮ ಜೀವನ ಸಾಗಿಸಲು ಬೇಕಾಗಿರುವಂತಹ ಕೊಬ್ಬರಿ ಬಟ್ಟಲು, ಉತ್ತತ್ತಿ, ಎಲೆ ಅಡಿಕೆ, ಧಾನ್ಯಗಳು ಮತ್ತು ಚಿಕ್ಕಪುಟ್ಟ ಕೊಡುಗೆಗಳು ಮಾತ್ರ ಅವರ ಪಾಲಾಗುತ್ತವೆ. ಆದರೂ ಸಹ ಅವರು ಶ್ರದ್ದೆಯಿಂದ ಈ ಕೆಲಸಗಳನ್ನೂ ನೆರವೇರಿಸಿ ಸಾಮಾಜಿಕ ಮೆಚ್ಚುಗೆಗೆ ಪಾತ್ರವಾಗುವದರೊಂದಿಗೆ ತಮ್ಮ ಮನೆತನದ ಜೀವನವನ್ನು ಸರಳಿತ ಗೊಳಿಸಿಕೊಳ್ಳುತ್ತಾರೆ. ಹೆಣಕ್ಕೆ ಸಂಭಂದಪಟ್ಟ ಮನೆಯವರು ಧಾರ್ಮಿಕ ಮೈಲಿಗೆ ಕರ್ಮ ಎಂದು ತಿಳಿದುಕೊಂಡು ಧರ್ಮಾದಿಗಳನ್ನು ಮಾಡುತ್ತಾರೆ. ಸಾಮಾನ್ಯ ವ್ಯಕ್ತಿಗಳು ಇಂತ ಒಂದು ಕ್ರಿಯೆಯನ್ನು ಭಾವನಾತ್ಮಕವಾಗಿ ಮಾನಸಿಕವಾಗಿ ಧಾರ್ಮಿಕತೆಗೆ ಒಳಪಟ್ಟು ನೆರವೇರಿಸಬೇಕೆಂಬ ಮನಸ್ಥಿತಿಯಲ್ಲಿ ಇರುತ್ತಾರೆ. ಆದರೆ ಜೀವನದ ಮೂಲಾಧಾರತೆಗಳನ್ನು ಹೊಂದಿದ, ಉದ್ಯೋಗಸ್ಥ ಬಾಡಿಗೆ ಮತ್ತು ಕಮ್ಮಾರುಗಳಿಗೆ ತಮ್ಮ ಉದ್ಯೋಗದ ಕಡೆಗೆ ಗಮನವಿರುತ್ತದೆ ಹೊರತು ಭಾವನಾತ್ಮಕತೆಗೆ ಹೆಚ್ಚು ಅವಲಂಬಿತವಾಗಿರುವದಿಲ್ಲ. ಇಂಥ ಶವ ಸಂಸ್ಕಾರದ ವೇಳೆಗಳು ಇತ್ತಿತ್ತಲಾಗಿ ವೈಭವಿಕಾರಣದ, ದೊಡ್ಡಸ್ತಿಕೆಯ ಸ್ಥಾನವನ್ನು ತಲುಪಿಬಿಟ್ಟಿದ್ದು ಸಾಮಾಜಿಕ ದೌರ್ಬಲ್ಯಗಳಲ್ಲೊಂದು.
3.
ಎಚ್ಚರದಿ ಆಮೆ ಹಾಗೆ ಗುರಿ ಮುಟ್ಟು,
ನೂರು ವರ್ಷ ಬದುಕುತ್ತೆವೆಂದು
ತಿಳಿದಿರುವುದೇ ಯಡವಟ್ಟು!
- ಎಮ್ಮೆಚ್ಚೆ
ವಿಸ್ತೃತ
ಈ ಹಿಂದೆ ನಾವು ಚಿಕ್ಕವರಾಗಿದ್ದಾಗ, ಮೊಲ ಮತ್ತು ಆಮೆಯ ಸ್ಪರ್ಧೆಯ ಕತೆಯನ್ನು ಕೇಳಿದ್ದೇವೆ. ಎಲ್ಲಾ ಪ್ರಾಣಿಗಳಲ್ಲಿ ಆಮೆ ನೆಲದ ಮೇಲೆ ಬಹು ನಿಧಾನ ಗತಿಯಿಂದ ಚಲಿಸುವ ಪ್ರಣಿಯಾಗಿರುತ್ತದೆ. ಇದು ಉಭಯ ವಾಸಿಯಾಗಿದ್ದು ನೀರಿನಲ್ಲಿ ಸ್ವಲ್ಪ ವೇಗವಾಗಿ ಚಲಿಸುತ್ತದೆ. ಭೂಮಿಯ ಮೇಲೆ ಇವುಗಳ ಚಲನೆ ನಿಧಾನವಾಗಿ ಆದರೂ ಸಹ ಇದರ ಜ್ಞಾನ, ಗುರಿ ಮುಟ್ಟುವ ಛಲ ಮೆಚ್ಚಲೇಬೇಕು. ಹಿಂದೆ ಹಿರಿಯರು ಸಹ ನಿಧಾನವಾಗಿ ಬಲು ಎಚ್ಚರಿಕೆ ಇಂದ ಗುರಿ ಮುಟ್ಟುವ ಕಥೆ ಹೇಳಲು ಈ ಆಮೆ ಪ್ರಾಣಿಯನ್ನು ನಿದರ್ಶನಗೊಳಿಸುತ್ತಿದ್ದರು.
ಈ ರೀತಿಯಾಗಿ ಬುದ್ದಿ ಹೇಳುವ ಹಿರಿಯರು ಸಾಮಾನ್ಯವಾಗಿ ನಮ್ಮ ಪೂರ್ವಿಕರು ಮತ್ತು ಹಿರಿಯ ವ್ಯಕಿಗಳಾಗಿದ್ದು ತಮ್ಮತನಗಳ ಅಂತಸ್ತುಗಳ ವಿಚಾರ ಮಾಡಿ ಅಂದಾಜಿಸಿ ಜನರ ವಯಸ್ಸು ಶತಮಾನ ಪೂರ್ತಿ ಎಂದು ತಿಳಿದು, ನಿಧಾನವೇ ಪ್ರಧಾನವೆಂದು ಹೇಳಿರಬಹುದು ಅನಿಸುತ್ತದೆ. ಆದರೆ ನಿಜವಾಗಿಯೂ ಈ ಜಂಜಡದ ಜಗತ್ತಿನಲ್ಲಿ, ಸಂಕೀರ್ಣತೆಯ ಸಮಾಜದಲ್ಲಿ ಪರಿಸರ ಕಲುಷಿತಗೊಂಡು ಅನಿಯಂತ್ರಿತ ಸಾಂಕ್ರಾಮಿಕ ರೋಗಗಳಿಂದ ಮಾನವರ ಸರಾಸರಿ ಆಯುಷ್ಯಗಳು ಗರಿಷ್ಟ ಪ್ರಮಾಣದಲ್ಲಿ ಇಳಿಕೆ ಆಗಿರುತ್ತದೆ. ಅಂದಾಜಿನಂತೆ ಅರ್ಧ ಶತಮಾನ ಕಳೆದರೂ ಅತೀ ಹೆಚ್ಚು ವಾಯಸ್ಕನ್ನೆನ್ನುವ ಪರಿಸ್ಥಿತಿ ಬಂದಿದೆ. ಆದ್ದರಿಂದ ಆಮೆಯ ಹಾಗೆ ನಿಧಾನವಾಗಿ ಬಲು ಎಚ್ಚರಿಕೆ ಇಂದ ಗುರಿ ಮುಟ್ಟುವುದು ಇಂದು ಅಸಾಧ್ಯವಾದ ಮಾತಾಗುತ್ತದೆ. ಆದ್ದರಿಂದ ಕಾಲ ಕಾಲಕ್ಕೆ ತಕ್ಕಂತೆ, ವ್ಯವಸ್ಥೆಗೆ ಅನುರೂಪವಾಗಿ ನಮ್ಮ ಚಲನಶೀಲತೆಯನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುವುದು ಅನಿವಾರ್ಯ ಆಗಿರುತ್ತದೆ ಮತ್ತು ಅಭಿವೃದ್ಧಿದಾಯಕ ಆಗಿರುತ್ತದೆ.


Comments
Post a Comment
Liked the post? Don't forget to tell us, do comment.