1.

ಕರ್ಮತೆಯ ನಾಡಿನಲಿ ಧರ್ಮತೆಗೆ ಬೆಲೆಯಿಲ್ಲ
ಊರಿಗೆ ಪುರವಂತ ಇರಲಿಕ್ಕೆ ನೆಲೆಯಿಲ್ಲ,
ನಾಯಕರಿಗೆ  ಬ್ರಹ್ಮಾಂಡ ಆಳಿದ ಕನಸು
ಅಧಿಕಾರಿಗಳಿಗೆ ಎಲ್ಲಾ ಗೆದ್ದ ಹುಮ್ಮಸ್ಸು!
                                                - ಎಮ್ಮೆಚ್ಚೆ

ವಿಸ್ತ್ರೃತ
    ಜಗತ್ತು ಆಧುನಿಕತೆಗೊಂಡಂತೆಲ್ಲ ಜನರು ಸ್ವೇಛ್ಛಾಚಾರಿಗಳಾಗಿ ಸಮಾಜ ವಿರೊಧಿ ಕೆಲಸಗಳತ್ತಲೇ ಮನಸ್ಸು ಮಾಡುತ್ತಿದ್ದಾರೆ. ಎಲ್ಲರೂ, ಹೇಗಾದರೂ ಮಾಡಿ ಶ್ರೀಮಂತರಾಗುವ ಹಪಹಪಿಗೆ ಬಿದ್ದಿದ್ದಾರೆ. ಸಮಾಜ ಸೇವೆಯ ಹೆಸರಿನಲ್ಲಿ ಗ್ರಾಮಗಳಲ್ಲಿ ಮರಿಪುಡಾರಿಗಳು, ಬಡವರಿಗೆ ಬರುವಂತಹ ಎಲ್ಲಾ ಸವಲತ್ತುಗಳನ್ನು ತಾವೇ ನುಂಗುತ್ತಿದ್ದಾರೆ. ಗ್ರಾಮದ ಮೂಲವಾಸಿಗಳೆಲ್ಲ ಮೂಲೆಗುಂಪಾಗಿದ್ದಾರೆ. ಯಕಶ್ಚಿತ ಮೂಲಭೂತ ಅನುಕೂಲತೆಯಿಂದಲೂ ವಂಚಿತರನ್ನಾಗಿಸಿದ್ದಾರೆ.
    ಇಂತಹ ಬ್ರಷ್ಟಾಚಾರಿಗಳಿಗೆ ಕುಮ್ಮಕ್ಕುಕೊಡಲು ಸರಕಾರಿ ಅಧಿಕಾರಿಗಳೂ ಇದ್ದಾರೆ. ಬ್ರಷ್ಟಾಚಾರದಲ್ಲಿ ಪಾಲುದಾರರೂ ಆಗಿ ಕೋಟಿಗಟ್ಟಲೆ ಹಣ ಲೂಟಿ ಹೊಡೆಯುತ್ತಾರೆ. ಅಸಹಾಯಕರು ಕೇಳಲು ಹೊದರೆ ದಭ್ಭಾಳಿಕೆಯಿಂದ ಬಾಯಿ ಮುಚ್ಚಿಸಿಬಿಡುತ್ತಾರೆ.

   ಕೇಂದ್ರ ಹಾಗೂ ರಾಜ್ಯ  ಸರಕಾರ ಗ್ರಾಮಾಭಿವ್ರೃದ್ಧಿಗಳಿಗೆ ಸಾಕಷ್ಟು ಹಣ ಒದಗಿಸಿದ್ದರೂ  ಸಹ ಗ್ರಾಮ ಪಂಚಾಯತಗಳಲ್ಲಿಯ ಬ್ರಷ್ಟಾಚಾರದಿಂದಾಗಿ ಸಮರ್ಪಕ ಕೆಲಸಗಳಾಗುತ್ತಿಲ್ಲ.  ಸದಸ್ಯರು, ಅಧಿಕಾರಿಗಳ ವಂಚನೆಗಳಿಂದ ನಿಜವಾದ ಫಲಾನುಭವಿಗಳ ಗೊಳು ತಪ್ಪುತ್ತಿಲ್ಲ. ಚುನಾಯಿತ ಸದಸ್ಯರುಗಳೆಲ್ಲ, ಇಡೀ ಬ್ರಹ್ಮಾಂಡವೇ ತನ್ನ ಕೈವಶವಾಗಿದೆ, ತಾವೇ ಸಾಮ್ರಾಟರು ಎಂಬ ವರ್ತನೆ ತೋರುತ್ತಾರೆ. ಇನ್ನು ಅಧಿಕಾರಿ ವರ್ಗದವರು ಈ ಬ್ರಷ್ಟಾಚಾರಗಳನ್ನು ಕೊಟ್ಟಿ ದಾಖಲೆಗಳಿಂದ ಮುಚ್ಚಿಹಾಕಿ ನಾವೇ  ಗೆದ್ದವರು ಎಂದು ಬಿಂಕಪಡುತ್ತಾರೆ.

2.

ಬದುಕಿಗೆ ಕತೆಗಳು ನೂರಾರು

ಹಣದ ಗತಿಗಳು ಮೂರು,
ಸಾವಿಗೆ ಕತೆಗಳು ಸಾವಿರಾರು
ಹೆಣದ ಗತಿಗಳೂ ಮೂರು!
                               - ಎಮ್ಮೆಚ್ಚೆ

ವಿಸ್ತೃತ
           ಮನುಷ್ಯರು ಜೀವನದಲ್ಲಿ ಬದುಕಬೇಕೆಂದರೆ ನಾನಾ ತರಹದ ಪಾತ್ರಗಳನ್ನು ವಹಿಸುತ್ತಾರೆ. ತಮ್ಮ ತನಗಳಲ್ಲಿಯೇ ಬದುಕುಗಳನ್ನು ಕಟ್ಟಿಕೊಂಡಿರುತ್ತಾರೆ. ನೂರಾರು ಮಾರ್ಗಗಳನ್ನು ಹುಡುಕಿಕೊಂಡಿರುತ್ತಾರೆ.
  ‌ಪ್ರತಿಯೊಂದು ವಸ್ತುವಿಗೂ ತನ್ನದೇ ಆದ ಸ್ಥಿತಿ, ಗತಿ, ಲಯವಿರುತ್ತದೆ. ನಾವು ವ್ಯವಹಾರಿಕತೆಗೆ ಉಪಯೋಗಿಸುವ ಹಣದ ಬಗ್ಗೆ ಅನೇಕ ಹಿರಿಯರು ಯಾವ ರೀತಿ ಗಳಿಸಬೇಕು, ಎಷ್ಟುಗಳಿಸಬೇಕು, ಗಳಿಸಿದ್ದನ್ನು ಯಾವುದಕ್ಕೆ ವ್ಯಯಮಾಡಬೇಕೆನ್ನುವುದರ ಬಗ್ಗೆ ಸಾಕಷ್ಟು ಹೇಳಿದ್ದಾರೆ.
   ಬದುಕಲು ಹಣ ಬೇಕೇ ಬೇಕು. ಜೀವನಾವಶ್ಯಕತೆಗೂ ಮಿಕ್ಕಿ ಗಳಿಸಿದ ಹಣವನ್ನು ಸತ್ಪಾತ್ರರಿಗೆ ದಾನ  ಧರ್ಮಗಳನ್ನು ಮಾಡಬೇಕು. ಅಸಹಾಯಕರಿಗೆ ಸಹಾಯ ಮಾಡುತ್ತ ಅವರ ಸಂತಸದಲ್ಲಿ ಭಾಗಿಯಾಗಬೇಕು.
    ಕೆಲವರು ಗಳಿಸಿದ ಹಣವನ್ನು ತಮ್ಮ ಮನಸನ್ನು ಹರಿಬಿಟ್ಟು ತಮ್ಮ ಭೋಗ ಲಾಲಸೆಗಳಿಗೆ ಬಲಿಯಾಗಿ ಹಾಳುಮಾಡುತ್ತಾರೆ. ಅಂಥವರು ದಾನ ಧರ್ಮಗಳಿಗಿಂತ ವಿಜ್ರೃಂಬಿತ ಜೀವನಕ್ಕೇ ಹೆಚ್ಚು ಹಣ ವ್ಯಯ ಮಾಡುತ್ತಾರೆ಼. 
‌  ಪ್ರತಿಯೊಬ್ಬರೂ ತಾವು ಗಳಿಸಿದ ಹಣವನ್ನು ದಾನಧರ್ಮಗಳಿಗಾಗಲಿ, ಭೋಗಕ್ಕಾಗಿಯಾಗಲಿ ಕಳೆದು ಮನಸಿಗೆ ನೆಮ್ಮದಿಯನ್ನು ಕಂಡುಕೊಳ್ಳುತ್ತಾರೆ. ಲಕ್ಷ್ಮಿ ಚಂಚಲೆಯಂತೆ, ಒಬ್ಬರಲ್ಲಿಯೇ ನಿಯತ್ತಾಗಿರುವವಳು ಅಲ್ಲವಂತೆ. ಹಣದ ಉದ್ದೇಶವೇ ಚಲಾವಣೆಯೂ ಹೌದು.
 ಇವೆರಡನ್ನೂ ಮಾಡದ ಕ್ರೃಪಣರು ಇನ್ನೂ  ಕೆಲವರಿರುತ್ತಾರೆ. ಅವರು ಎಂಜಲು ಕೈಯಲ್ಲಿ ಕಾಗೆಯನ್ನೂ ಒಡಿಸಲಾರರು. ಅವರು ಕೇವಲ ಗಳಿಸುವದಕ್ಕಾಗಿಯೇ ಹುಟ್ಟಿದವರಾಗಿರುತ್ತಾರೆ. ಅಂಥವರ ಹಣ ಯಾವುದೇ ರೂಪದಲ್ಲಾದರೂ ನಾಶವಾಗಿ ಹೊಗುತ್ತದೆ. ತನ್ನ ಅಸ್ತಿತ್ವ ಕಳೆದುಕೊಳ್ಳುತ್ತದೆ.
  ಸಾವು (ಮರಣ) ಎನ್ನುವಂತಹದು ಒಂದೇ ತರಹದ್ದಾಗಿದ್ದರೂ ಸಹ ಸಾವಿಗೆ ನಾನಾ ತರಹದ ಸಾವಿರಾರು ಹೊಸ ಹೊಸ ಮಾರ್ಗಗಳಿವೆ. ಸಾವು ಯಾವುದೇ ರೀತಿಯಲ್ಲಾದರೂ ಬರಬಹುದು. ಜೀವವಿರದ ದೇಹಕ್ಕೆ ಹೆಣ ಅನ್ನುತ್ತಾರೆ. ಹೆಣವನ್ನು ಯಾರೂ ಹಾಗೆಯೇ ಇಟ್ಟುಕೊಳ್ಳುವದಿಲ್ಲ. ಅವರವರ ರೀತಿ ರಿವಾಜುಗಳಂತೆ ಕೆಲವರು ನೆಲದಾಳದಲ್ಲಿ ಹುಗಿಯುತ್ತಾರೆ, ಇನ್ನು ಕೆಲವರು ಸುಡುವುದರ ಮುಖಾಂತರ ಹೆಣಕ್ಕೆ ಗತಿ ಕಾಣಿಸುತ್ತಾರೆ. ಇವೆರಡೂ ಆಗದಿದ್ದ ಪಕ್ಷದಲ್ಲಿ ಹೆಣವನ್ನು ಯಾವವಾದರೂ ಪ್ರಾಣಿ, ಪಕ್ಷಿಗಳು ತಿಂದುಬಿಡುತ್ತವೆ.
  ಆದ್ದರಿಂದ ಮನುಷ್ಯರಾದವರು ಒಳ್ಳೆಯ ಮಾರ್ಗದಿಂದ ಹಣ ಗಳಿಸುತ್ತ, ಅದನ್ನು ಸದುಪಯೋಗ ಪಡಿಸಿಕೊಂಡು, ಎಲ್ಲರೊಂದಿಗೆ ಚನ್ನಾಗಿ ಬದುಕಿ ಒಳ್ಳೆಯ ಸಾವುಕಂಡು ಮುಕ್ತಿಹೊಂದಬೇಕು.

3.
                                      
ಗದ್ದುಗೆಯದೇ ಸದ್ದು ಗೆದ್ದು ಬಂದವಗೆ
ಇದ್ದುದೇ ಸ್ವರ್ಗ ಬಿದ್ದು ಒದ್ದಾಡುವವಗೆ,
ನಿದ್ದೆಯದೇ ಭಾರೀ ಸದ್ದು ಎದ್ದು ಕುಳಿತವಗೆ
ಎಲ್ಲ ನೋವೂ ಮಾಯ ಹೊದ್ದು ಮಲಗಿದವಗೆ!
                                                                   - ಎಮ್ಮೆಚ್ಚೆ

ವಿಸ್ತೃತ
    ಅಧಿಕಾರ ಹಿಡಿದ ಎಲ್ಲಾ ನಾಯಕರು ಜನಸೇವೆಗಿಂತಲೂ ಹೆಚ್ಚು ಭವಿಷ್ಯದಲ್ಲಿ ಹೆಚ್ಚಿನ ಸ್ಥಾನಕ್ಕೆ ಆಸೆಪಡುವುದರೊಂದಿಗೆ ಇದ್ದ ಸ್ಥಾನವನ್ನು ಭದ್ರ ಪಡಿಸಿಕೊಳ್ಳಲು ಒದ್ದಾಡುತ್ತಾರೆ. ಎಂತಹ ಸಂದಿಗ್ದ ಪರೀಸ್ಥಿತಿಯಲ್ಲೂ ತನ್ನ ಅಧಿಕಾರದ ಮದದಿಂದ ಬೀಗಿ ಮೆರೆದಾಡಬೇಕೆಂಬ ಮನಸ್ಥಿತಿ ಅವರದಾಗಿರುತ್ತದೆ.
    ಮಾರಕ ರೋಗದ ಸೊಂಕುಗಳ ಹೆದರಿಕೆಗೆ ಗ್ರೃಹಬಂಧಿದವರು  ಕೆಲಸಗಳನ್ನು ಕಳೆದುಕೊಂಡು ಜೀವನ ಸಾಗಿಸಲು ಪರಿಪಾಟಲು ಪಡುವಂತಾದರೂ ಚಿಂತೆಯಿಲ್ಲ, ಈ ರೋಗದ ಕೈಯಿಂದ ಬಚಾವಾಗಿ ಬದುಕುತ್ತೇವಲ್ಲ ಅದು ಎಲ್ಲಕ್ಕೂ ಹೆಚ್ಚು. ಸ್ವರ್ಗ ಲೋಕಕ್ಕು ಹೆಚ್ಚು ಆರಾಮವಾಗಿ ತಾನಿರುವ ಮನೆ ಎನ್ನುವಂತಾಗಿದೆ.
    ಬದುಕುವದಕ್ಕಾಗಿ ಎಷ್ಟೇ ಮುಂಜಾಗ್ರತೆಯನ್ನು ತೆಗೆದುಕೊಂಡರೂ ಕೂಡ ರೋಗ ಸೋಂಕು ಬರುವುದಿಲ್ಲ ಎನ್ನುವದಕ್ಕೆಯಾವ ಭರವಸೆಗಳೂ ಇಲ್ಲ. ಸೊಂಕಿನ ನಿಖರತೆಯ ಮಾಯಾಜಾಲದಲ್ಲಿ ಏನಿದೆಯೋ ಯಾರಿಗೂ ತಿಳಿಯದು.ಅದರಲ್ಲೂ ಮುಗ್ದ ಜನರಿಗೆ ಆವರಿಸಿದ ಭಯದಿಂದಾಗಿ ನಿದ್ರೆ ಬರದೆ ಚಿಂತಿಸುತ್ತಿದ್ದರೆ, ಅಂತಹ ನೀರವ ಮೌನ ರಾತ್ರಿಯಲ್ಲಿ ಪಕ್ಕ ಮಲಗಿದವರ ನಿದ್ದೆಯ ಗೊರಕೆ ಸಪ್ಪಳಗಳೇ ಭಾರೀ ಗೊಂದಲವುಂಟುಮಾಡಿ ತೊಂದರೆ ಕೊಡುತ್ತದೆ.
     ತಮ್ಮ ಜೀವನ ಜವಾಬ್ದಾರಿ ಹೊತ್ತ ರೈತ, ಕೂಲಿ ಕಾರ್ಮಿಕರು ಸಿಕ್ಕ ಸಿಕ್ಕ ಕೆಲಸ ಕಾರ್ಯಗಳನ್ನು ಮಾಡಿ ದೈಹಿಕ ಶ್ರಮದಿಂದಾಗಿ ಮಲಗಿದರೆಂದರೆ ಮುಂಜಾನೆಯವರೆಗೂ ಯಾವ ದುಗುಡತೆಗಳಿಲ್ಲದೆ ಆರಾಮವಾಗಿ ನಿದ್ದೆ ಮಾಡುತ್ತಾನೆ.
       ಆದ್ದರಿಂದ, ನಾಯಕರೆನಿಸಿಕೊಂಡವರು ಜನಸೇವಕರಾಗಬೇಕು. ಜನ ಸಾಮಾನ್ಯರು ಅನಿವಾರ್ಯದ ಹೊರತು ಹೊರಗೆಹೋಗದೆ ಮನೆಯಲ್ಲಿದ್ದು ಜೀವ ಉಳಿಸಿಕೊಳ್ಳಬೇಕು. ಯಾವುದಕ್ಕೂ ಭೀತಿಗೊಳ್ಳದೆ ಸಮಾಜಿಕ ಅಂತರದಿಂದ ಶ್ರಮವಹಿಸಿ ಕೆಲಸಮಾಡಿ, ಚನ್ನಾಗಿ ಊಟಮಾಡಿ  ಬೆಚ್ಚಗೆ ವಿಶ್ರಮಿಸಿದರೆ ಒಳ್ಳೆಯದು. ಬಂದ ಕರೋನ ಬಂದ್ ಆಗುತ್ತದೆ.



Comments

Popular Posts