1.
ಆಗುವದಲ್ಲವದು ಎಲ್ಲ ಮುಗಿದಾದ ಮೇಲೆ ಬುದ್ಧ
ಇದ್ದಾಗಲೇ ಹೇರಿಕೊಳ್ಳಬೇಕು ಮನಸಿಗೆ ನಿಷಿದ್ಧ
ಅನುಭಾವಿ ಅಣ್ಣನ ಕಾಯಕದ ಕೈಲಾಸವಯ್ಯ,
ಕರೋನಕ್ಕೆ ಕಾಯಕವಿಲ್ಲ, ಬರೀ ಕೈ ಸಾಲವಯ್ಯ!
                                                                       - ಎಮ್ಮೆಚ್ಚೆ

ವಿಸ್ತ್ರೃತ
    ಬುದ್ಧನೆನಿಸಿಕೊಳ್ಳಲು ಕೇವಲ ಬುದ್ಧನೊಬ್ಬನಿಗೇ ಸಾಧ್ಯ. ಆದರೆ ಉಳಿದವರು ಬುದ್ಧತ್ವ ಪಡೆಯಲು ಪ್ರಯತ್ನಿಸಬಹುದಷ್ಟೇ. ಆಸೆಯೇ ದುಖಕ್ಕೆ ಮೂಲ ಎಂದು ತಿಳಿದು ಏನೆಲ್ಲ ಸಕಲ ಸಂಪತ್ತು, ವೈಭವ ಪೂರಿತ ರಾಜ್ಯ, ಸುಂದರವಾದ ಮಡದಿ ಎಲ್ಲವುಗಳನ್ನೂ ಹೊಂದಿದಂತ ರಾಜಕುವರ ಎಲ್ಲವನ್ನೂ ತ್ಯಜಿಸಿ, ತನ್ನನ್ನು ತಾನು ಗೆದ್ದು ಬುದ್ಧನಾಗುವದು ಅಷ್ಟು ಸರಳ ಸಾಧ್ಯವಾದ ಮಾತಲ್ಲ. ಈಗ ಸಾಮಾನ್ಯವಾಗಿ ಎಲ್ಲರೂ, ತಾವು ಇದ್ದ ಸ್ಥಿತಿಗತಿಗಳಿಗಿಂತ ಹೆಚ್ಚಾದ ಅನುಕೂಲತೆ ಒದಗಿಸಿಕೊಳ್ಳಬೇಕೆಂಬ ಮಹದಾಸೆಯನ್ನು ಹೊಂದಿದವರಾಗಿರುತ್ತಾರೆ. ಅಂಥಹ ಸಂಸಾರಿಕ ಸೌಭಾಗ್ಯಕ್ಕಾಗಿಯೇ ಪರದಾಡುತ್ತಿರುತ್ತಾರೆ. ಇಂಥವರು ತೃಪ್ತಿಯನ್ನುವುದನ್ನೇ ಕಳೆದುಕೊಂಡು ಇನ್ನೂ ಬೇಕು ಎನ್ನುವ ಮನಸ್ಥಿತಿಯಲ್ಲಿಯೇ ಇರುತ್ತಾರೆ. ಇನ್ನೂ ಬೇಕೆನ್ನುವಂತಹ ಬಯಕೆಯಲ್ಲಿಯೇ ಬಂದ ಭಾಗ್ಯವನ್ನೂ ಕಳೆದುಕೊಳ್ಳುತ್ತಾರೆ. ಸಿರಿ ಬಂದಾಗ ಅದನ್ನು ಸದ್ಬಳಕೆ ಮಾಡದೆ ದುರುಪಯೋಗ ಪಡಿಸಿಕೊಂಡು ದೊಡ್ಡ ದೊಡ್ಡ ಔಷಧಿ ರಹಿತ ರೋಗಗಳಿಗೆ ಬಲಿಯಾಗಿ ಬಿಡುತ್ತಾರೆ. 
    ಮನುಷ್ಯ ಕ್ರೀಯಾಶೀಲವಾಗಿ ಸರಿಯಾದ ದಾರಿಯಲ್ಲಿ  ನಡೆದು ದೇವಮಾನವರಾಗಲು, ಅಣ್ಣ ಬಸವಣ್ಣನವರು ಎಲ್ಲಕ್ಕಿಂತ ಸರಳ ಮಾರ್ಗವನ್ನು ತೋರಿಸಿಕೊಟ್ಟು ವಿಶ್ವ ಗುರುವಾದರು. ಎಲ್ಲರೊಂದಿಗೆ ಹೇಗಿರಬೇಕೆಂದು ತೋರಿಸಿಕೊಟ್ಟು ವಿಶ್ವ ಮಾನವತ್ವವನ್ನು ಸಾರಿದರು. ಕಳಬೇಡ, ಕೊಲಬೇಡ, ಹುಸಿಯನುಡಿಯದಿರೆಂದು ಸರಳವಾಗಿ ಹೇಳಿ ಎಲ್ಲರನ್ನೂ ಸಾತ್ವಿಕರನ್ನಾಗಿಸಿದರು.
    ಜಗತ್ತು ಮುಂದುವರೆದಂತೆಲ್ಲ ಜನರು ಬಂಧ ಮುಕ್ತದಾಸೆಯ ಜನರು ಸಾಮಾಜಿಕ ಕಟ್ಟಳೆಗಳನ್ನು ಮುರಿಯುತ್ತ ಶ್ವೇಛ್ಛಾಚಾರಿಗಳಾಗಿ ಅನೇಕ ಮದ್ದುರಹಿತ ರೋಗಗಳು  ಉಲ್ಬನಗೊಂಡವು ಡೆಂಗ್ಯೂ, ಸಾರ್ಸ, ಎಚೈವಿ, ಹಕ್ಕಿ ಜ್ವರ, ಹಂದಿ ಜ್ವರ,....ಗಳಿಂದ ಹೇಗೆಹೇಗೋ ನುಸುಳಿಕೊಂಡು ಬಂದ ಜನರಿಗೆ ಈಗ ಕೋವಿಡ್ 19 ಅನ್ನುವಂತ ವೈರಾಣು ತನ್ನ ತನವನ್ನು ಮೆರೆಯುತ್ತ ಪ್ರಪಂಚದಾದ್ಯಂತ ಕರೋನ ರೋಗದಿಂದ ಲಕ್ಷಾಂತರ ಜನರನ್ನು ಬಲಿತೆಗೆದುಕೊಂಡಿದೆ. ಈ ಮದ್ದಿಲ್ಲದ ರೋಗ ತನ್ನ ಕ್ರೂರತೆಯನ್ನು ನಿಲ್ಲಿಸುತ್ತಲೇ ಇಲ್ಲ.
 ಕರೋನ ಮಾರಿ ಜನರ ಬದುಕನ್ನೇ ನಾಶಮಾಡಿ ಬಿಟ್ಟಿದೆ. ಸಾಮಾಜಿಕ ಅಂತರ, ಲಾಕ್ ಡೌನ್, ಅವ್ಯಕ್ತ ಭಯಗಳಿಂದಾಗಿ ಬಹುಜನರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡು ದಿನವಹಿ ಜೀವನ ಸಾಗಿಸುವುದೇ ದುಸ್ತರವಾಗಿಬಿಟ್ಟಿದೆ. ಒಮ್ಮಿಂದೊಮ್ಮೆಲೇ ವಕ್ಕರಿಸಿದ ಮಾರಿಯಿಂದಾಗಿ ಮನಸ್ಸುಗಳು ಪರೀಸ್ಥಿತಿಗೆ ಹೊಂದಿಕೊಳ್ಳದೆ ಆರ್ಥಿಕ ಮುಗ್ಗಟ್ಟಿನಿಂದ ಪರಿತಪಿಸಿ, ಎಲ್ಲಿ ಸಾಲಗಳು ಸಿಗುತ್ತವೆಯೋ ಅಲ್ಲಿ ಪಡೆದು ಜೀವನಕ್ಕೆ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ಇದು ಮನವ ನಿರ್ಮಿತ ವೈರಾಣು ಇರಬಹುದೆಂಬ ಸಂಶಯ ಜಗತ್ತಿಗೇ ಮನೆಮಾಡಿದೆ.
  ಆದ್ದರಿಂದ ನಾವುಗಳು ಯಾವುದೇ ರೀತಿ ವಿಚಲಿತತೆಗೆ ಒಳಗಾಗದೆ ಬುದ್ದನ ಮನಸ್ಥಿತಿಯಲ್ಲಿ ಶಾಂತ ರೀತಿಯಿಂದ, ಬಸವಣ್ಣ ಹೇಳಿದಂತೆ ನಮ್ಮ ನಮ್ಮ ಕೌಟುಂಬಿಕ ವಂಶಿಕ ಕೆಲಸಗಳನ್ನು ಮಾಡುತ್ತ ಸಾಮಾಜಿಕ ಅಂತರ ಕಾಯ್ದುಕೊಂಡು ಕರೋನ ಇಲ್ಲದಂತೆ ಮಾಡೋಣ.

2.
ವ್ಯರ್ಥ ಮಾಡುವದೇ ಅದರರ್ಥ
ವಂಚಕರ ಒಳಗಿನ ಗೂಡಾರ್ಥ,
ತಿಳಿದವಗೇ ಹೆಚ್ಚು ಸ್ವಕಾರ್ಯ ಸ್ವಾರ್ಥ
ನೈಜತೆಗೆ ಬೆಲೆ ಕೇಳಿಕೆಯದೇ ವ್ಯರ್ಥ!
                               ಎಮ್ಮೆಚ್ಚೆ

ವಿಸ್ತ್ರೃತ
    ಒಳ್ಳೆಯದನ್ನು ಮಾಡಬೇಕೆನ್ನುವ ಮನಸ್ಥಿತಿ ವಂಚನೆ ಮಾಡುವವರ ಮನಸ್ಸಿನಲ್ಲಿ ಬರುವುದೇ ಇಲ್ಲ. ಹೇಗಾದರೂ ಮಾಡಿ ಬಲ್ಲಿದನನ್ನು ಬರಿದಾಗಿಸಬೇಕೆಂಬ ಮನಸಿನವರಾಗಿರುತ್ತಾರೆ. ಉಳ್ಳವರ ಸ್ವ ಆವಶ್ಯಕತೆಗಳು, ಸಮಯ ಸಂದರ್ಭ, ಪರಿಣಾಮ ಇಂತವುಗಳನ್ನೂ ವಂಚನೆಮಾಡುವವರು ಚಿಂತಿಸುವುದೇ ಇಲ್ಲ. ತಾವು ಬಯಸಿದುದು ತಮ್ಮ ಕೈವಶವಾಗಬೇಕು ಅಷ್ಟೆ. ಕೆಲವು ಜನರು ವಂಚೆನೆಗೆ ಒಳಗಾದಾಗ (ನ್ಯಾಯ, ನೀತಿ, ಧರ್ಮಗಳ ಅನಿತಿಗೆ ಒಳಪಟ್ಟಂತೆ) ನಾನು ಯಾರಿಗೂ ಅನ್ಯಾಯವನ್ನು ಮಾಡಿಲ್ಲ ಆದರೂ ತನಗೇಕೆ ಇಂತ ಕಷ್ಟ,ನನಗೆ ಮೋಸ ಮಾಡು ವಂತದ್ದಕ್ಕೆ ಕಾರಣ ಏನಿರಬಹುದೆಂದು ವಿನಾಕಾರಣ ಅಲವತ್ತುಕೊಳ್ಳುತ್ತಿರುತ್ತಾರೆ. ವಂಚಿಸುವವರಿಗೆ ವಂಚನೆ ಮಾಡುವುದೆ ಕಾರಣವಾಗಿರುತ್ತದೆಂದು ತಿಳಿದುಕೊಳ್ಳುವುದೇ ಇಲ್ಲ.
   ಎಲ್ಲವನ್ನು ತಿಳಿದುಕೊಂಡ ವಿಧ್ಯಾವಂತ, ಅನುಭವಿಗಳು ಸಾಮಾಜದಲ್ಲಿ ಆಗುವಂತಹ ಮೋಸ ವಂಚನೆಗಳನ್ನು ತಡೆಗಟ್ಟುವ ಪ್ರಾಮಾಣಿಕ ಪ್ರಯತ್ನ ಮಾಡದೆ ಅಂಥಹದ್ದರಲ್ಲೂ ತಮ್ಮ ಸ್ವಾರ್ಥಕ್ಕೆ ಏನಾದರೂ ಲಾಭವಾಗುತ್ತದೆಯೆ ಎನ್ನುವ ವಿಚಾರದಲ್ಲಿಯೇ ಇರುತ್ತಾರೆ. ಇಂತವರಿಂದ ಸಮಾಜಿಕ ಸ್ವಾಸ್ಥ್ಯ ಹಾಳಾಗಿ ಸ್ವ ಲಾಭಮಾತ್ರ ಆಗುತ್ತದೆ. ಇಂಥವರೂ ಸಹ ವಂಚಕರ ಮನಸ್ಥಿತಿಯವರೇ ಆಗಿರುತ್ತಾರೆ. ಜನರಲ್ಲಿ ಒಳ್ಳೆಯ ರೀತಿಯಿಂದಲೇ ಇದ್ದು ಎಲ್ಲರನ್ನೂ ಯಾಮಾರಿಸಿ ನಯವಂಚಕರಾಗಿರುತ್ತಾರೆ. ಇವರು ವಂಚಕರಿಗಿಂತ ಹೆಚ್ಚಿಗೆ ಮಹಾ ವಂಚಕರಾಗಿರುತ್ತಾರೆ. ಇಂತಹವರುಗಳ ವಂಚಕರ ಸಾಮ್ರಾಜ್ಯದಲ್ಲಿ ನೈಜ ಕಳಕಳಿಯ ವ್ಯಕ್ತಿ ತನ್ನ ಮರ್ಯಾದೆ ಕಳೆದುಕೊಳ್ಳುತ್ತಾನೆ. ಎಲ್ಲರೂ ಅವನನ್ನು ವಿರೋಧಿಸುವುದರೊಂದಿಗೆ ಆತ ಸರಿಯಾಗಿದ್ದುದೇ ತಪ್ಪು ಎನ್ನುವಂತೆ ಬಿಂಬಿಸುತ್ತಾರೆಯೇ ಹೊರತು ತಮ್ಮದು ತಪ್ಪು ತಿದ್ದಿಕೊಳ್ಳಬೇಕು ಅಂದುಕೊಳ್ಳದೆ ನುಸುಗುಣಿ ಪುಡಿಯಹಾಗೆ ಉಳಿದುಬಿಡುತ್ತಾರೆ.

Comments

Popular Posts