1.

ಆತ್ಮ ಗೌರವವೇ ಗಳಿಕೆಯ ನಿರೀಕ್ಷೆ
ಸಫಲರಾಗಲು  ಎಲ್ಲರಿಗೂ ಪರೀಕ್ಷೆ,
 ಎಲ್ಲ ಬೀಜಕ್ಕೆ ಮೊಳಕೆಯ ಗೌಪ್ಯ ನಿರೀಕ್ಷೆ
ಅದೂ ಹೌದು ಅದರದರ ಜೀವನ ಪರೀಕ್ಷ!
                                                         -  ಎಮ್ಮೆಚ್ಚೆ

ವಿಸ್ತೃತ
    ಪ್ರತಿಯೊಬ್ಬರಿಗೂ ತಮ್ಮದೇ ಆದಂತಹ ಆತ್ಮಾಭಿಮಾನ ಇರುತ್ತದೆ. ತಕ್ಕಹಾಗೆ ನಡೆದುಕೊಂಡು ಸೈ ಎನಿಸಿಕೊಂಡು ಆತ್ಮಗೌರವ ಕಾಪಾಡಿಕೊಳ್ಳುವುದೇ ಪ್ರತಿಯೊಬ್ಬರ ಮಹಾದಾಸೆ ಯಾಗಿರುತ್ತದೆ. ನಮ್ಮತನಕ್ಕೆ ಗೌರವಾದರಣೆಗಳನ್ನು ತೀವ್ರತರವಾಗಿ ಬಯಸುತ್ತೇವೆಂದರೆ, ಅದಕ್ಕೆ ತಕ್ಕಹಾಗೆ ಜನರೊಂದಿಗೆ ನಾವೂ ನಡೆದುಕೊಳ್ಳುವ ಗುರುತರ ಜವಾಬ್ದಾರಿಗಳೂ ನಮ್ಮ ಮೇಲಿರುತ್ತದೆ. ಆತ್ಮಗೌರವಕ್ಕೆ ಯಾರೂ ಯಾವುದೇ ಬೆಲೆಕಟ್ಟಲಾಗುವದಿಲ್ಲ. ಆತ್ಮಗೌರವವೆನ್ನುವುದು ವ್ಯಕ್ತಿಯ ಒಟ್ಟಾರೆ ಜೀವನದ ಗರಿಷ್ಟ ಗರಿಮೆಯ ಹಂತ. ಎಲ್ಲರೂ ಇದರ ಆಕಾಂಕ್ಷಿಗಳೇ, ಆದರೆ ಎಲ್ಲರೂ ಒಂದೇ ಸಮ ಗೌರವ ಆದರಕ್ಕೆ  ಪಾತ್ರರಲ್ಲ. ಅವರವರು ಜೀವಿಸಿದ ಜೀವನ ಕ್ರಮದನುಗುಣವಾಗಿ ಗೌರವಾದರಗಳು ರೂಪಗೊಂಡಿರುತ್ತವೆ. ಎಲ್ಲ ತರಹದ ಅಡೆತಡೆಗಳನ್ನು ನೀಗಿ ಗುರಿ ತಲುಪುವುದು ಎಲ್ಲರಿಗೂ ಮುಖ್ಯವಾಗಿರುತ್ತದೆ.
  ಪ್ರತಿಯೊಂದು ಜೀವರಾಶಿಗಳ ಜೀವಾಣುಗಳಿಗೂ, ತಾನು ಫಲದ್ಬರಿಸಿ ಮೊಳಕೆಯೊಡೆಯಬೇಕು ಎನ್ನುವಂತ ಹಂಬಲ ಇರುತ್ತದೆ. ಎಲ್ಲ ಜೀವಾಣುಗಳಿಗೂ  ಫಲದ್ಬರಿತದ ಆಸೆಗಳಿದ್ದರೂ ಸಾಧ್ಯವಾಗುವದಿಲ್ಲ. ಒಂದೊಮ್ಮೆ ಸಾಧ್ಯವಾಗದ್ದು ಸಾಧ್ಯವಾಗಿದ್ದರಿಂದಲೇ ಚಿತ್ರವಿಚಿತ್ರ ಸಮಾಜ ಘಾತಕ ಸಂಸ್ಕೃತಿ ಹೀನರು ಹುಟ್ಟಿರಬಹುದು ಅನ್ನಿಸುತ್ತದೆ. ಏಕೆಂದರೆ, ಎಂಥಹ ಕ್ಷುಲ್ಲಕರಿಗೂ  ತನ್ನ ಸ್ವ ಜೀವನವೆನ್ನುವದು ಇರುತ್ತದೆ. ಹೇಗೆ ಹೇಗೋ ಬದುಕುತ್ತಿರುತ್ತಾರೆ. ಆ ತರಹದ ಅವರ ಬದುಕಿಗೆ ಜನರೆಲ್ಲರ ವಿರೋಧವೂ ಇರುತ್ತದೆ. ಆದರೆ ಆ  ಸ್ಥಾನದಲ್ಲಿರುವವರಿಗೆ ಅದು ಸರಿಯಾದುದೇ ಆಗಿ ಕಾಣುತ್ತಿರುತ್ತದೆನ್ನುವುದು ವಿಪರ್ಯಾಸವೂ ಹೌದು.

2.

ಭ್ರಮೆಯ ಭಾವನೆಗೆ ನೀನಾದೆ ಬಂಧಿ 
ಸುಂದರತೆಬೀರುವದದು ಸುರಕ್ಷಿತ ಅಂತರದಿ,
ರೇಖಿಸಿದ ಸುತ್ತೆಂದೂ ಪರಿಪೂರ್ಣವಲ್ಲ
ಜನಿಸಿದ ಮಾನವನೆಂದೂ ಸಂಪೂರ್ಣನಲ್ಲ!
                                                                     - ಎಮ್ಮೆಚ್ಚೆ

ವಿಸ್ತ್ರೃತ
 ಎಲ್ಲ ವಸ್ತುಗಳಿಗೂ ತನ್ನದೇ ಆದ ಗುಣಸ್ವಭಾವಗಳಿರುತ್ತದೆ. ಅದು ನೈಜತೆಯಿಂದಲೇ ಕೂಡಿದುದಾಗಿರುತ್ತದೆ. ಆದರೆ ಅದನ್ನು ನೋಡಿ ಸುಂದರವಾಗಿದೆ ಎಂದು ಮೆಚ್ಚಿಕೊಳ್ಳಲು ಕೇವಲ ನೈಜತೆಯೇ ಮಾನದಂಡ ಆಗಿರುವದಿಲ್ಲ.ಸುಃದರತೆ ನೋಡುವವರ ನೋಟವನ್ನು ಅವಲಂಬಿಸಿರುತ್ತದೆ. ಒಬ್ಬರಿಗೆ ಸುಂದರವಾಗಿ ಕಂಡಂತಹ ವಸ್ತು ಇನ್ನೊಬ್ಬರಿಗೆ ಕುರೂಪವಾಗಿಯೂ ಕಾಣಬಹುದು. ಯಾಕೆ ಹೀಗಾಗುತ್ತದೆ? ಎಲ್ಲರಿಗೂ ಒಂದೇ ರೀತಿಯಾಗಿ  ಸುಂದರವಾಗಿ ಕಾಣುವದಿಲ್ಲ? ಇದರಲ್ಲಿ ಅಡಗಿರುವ ಕೌತುಕವಾದರೂ ಏನಿರಬಹುದು?
  ಸಾಮಾನ್ಯವಾಗಿ ಎಲ್ಲರೂ ತಮಗೆ ತಿಳತಿಳಿದಂತೆ ಬ್ರಮಿಸಿಕೊಂಡು ಬ್ರಮಾದೀನತೆಯಲ್ಲಿಯೇ ಬದಕುತ್ತಾರೆ. ವಸ್ತುವಿನ ನೈಜತೆ ಬ್ರಮಾದೀನತೆಯಲ್ಲಿಯೇ ಮರೆಮಾಚಿರುತ್ತದೆ. ನೋಡುವ ನೋಟದಲ್ಲಿ, ಅವರವರ ದ್ರೃಷ್ಠಿಯಲ್ಲಿ ಸುಂದರತೆ ಅಡಗಿದೆ ಅಂತಾದರೆ, ಎಷ್ಟು ಅಂತರದಿಂದ ನೋಡಬೇಕು?ಅನ್ನುವುದು ಇನ್ನೂ ಮುಖ್ಯವಾಗಿರುತ್ತದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಜಗತ್ತಿನ ಪ್ರತಿವಸ್ತುಗಳನ್ನೂ ಆ ವಸ್ತುಗಳಿಗೆ ತಕ್ಕುದಾದ, ಯೋಗ್ಯ ಅಂತರದಲ್ಲಿ ನೋಡಿದರೆ ಪ್ರತಿ ವಸ್ತುಗಳೂ ಸುಂದರವಾಗಿ ಕಾಣುತ್ತವೆ. ಅಂತಹ ಸುಂದರತೆಯನ್ನು ಸವಿಯುವ ಮನಸ್ಸು ನಮ್ಮದಾಗಿರಬೇಕೇ ಹೊರತು, ದಿಟ್ಟಿಸಿ ನೋಡಿದರೆ ಮನೆ ಹೆಂಡತಿಗೆ ಮೆಳ್ಳಗಣ್ಣು ಎನ್ನುವಂತೆ ವಸ್ತುಗಳ ನೈಜತೆಗಳಿಂದ ಹಳಹಳಿಸುವ ಬದಲು ನೈಜತೆಯನ್ನು ಅರಿತು ಸುರಕ್ಷಿತವಾದ ಅಂತರದಲ್ಲಿದ್ದು ಅವುಗಳ ಸುಂದರತೆ ಸವಿಯುವದು ಮುಖ್ಯವಾದುದು. ‌
   ಹಾಗೆ ನೋಡಿದರೆ ಈ ಜಗತ್ತಿನಲ್ಲಿ ಯಾವುದೂ ಪೂರ್ಣತೆಯನ್ನು ಹೊಂದಿಲ್ಲ. ಒಂದೊಂದಕ್ಕೆ ಒಂದೊಂದು ತರಹದ ನೂನ್ಯತೆ ಕಾಣುತ್ತದೆ. ಸಾಮಾನ್ಯವಾಗಿ ಪೂರ್ಣತೆ ಹೊಂದಿದಂತೆ ಕಂಡರೂ ಪರಿಪೂರ್ಣತೆಯನ್ನು ಹೊಂದಿರಲಾರದು. ಕೊರತೆ ಇರುವಲ್ಲಿ ಪರಿಪೂರ್ಣತೆ ಇರಲಾರದು. ಗಣಿತ ಶಾಸ್ರದಂತೆ, ಯಾವುದೇ ರೀತಿ ಕೊರತೆಯುಳ್ಳ ವರ್ತುಲ ಪರಿಪೂರ್ಣ ವರ್ತುಳವಾಗಿರುವದಿಲ್ಲ. ಅದೇ ರೀತಿಯಾಗಿ ಹುಟ್ಟಿದ ಮನುಷ್ಯರೆಲ್ಲರೂ ಎಲ್ಲವನ್ನೂ ಸಂಪೂರ್ಣವಾಗಿ  ಪಡೆದುಕೊಂಡು ಪರಿಪೂರ್ಣವಾಗಿರುವದಿಲ್ಲ. ಏಕೆಂದರೆ, ಎಲ್ಲರೂ ಒಂದೊಂದು ತರಹದ ನೂನ್ಯತೆಯಿಂದ ಬಳಲುವವರೇ ಆಗಿರುತ್ತೇವೆ. ಬ್ರಮೆ ಕಲ್ಪನೆಯಿಂದ ಕೂಡಿದ್ದರೆ, ಸತ್ಯವಾದ ಸುಂದರತೆ ಶಾಶ್ವತತೆಯನ್ನು ಪಡೆದುಕೊಂಡಿರುತ್ತದೆ.
  ಆದ್ದರಿಂದ ಸತ್ಯಂ, ಶಿವಂ, ಸುಂದರಂ ಎನ್ನುವಂತೆ ಸತ್ಯಾಸತ್ಯತೆಗಳನ್ನು ಅರಿತುಕೊಂಡು  ಬ್ರಮಾಧೀನತೆಗೆ ಒಳಪಡದೆ ನಮ್ಮ ನೂನ್ಯತೆ ಸರಿಪಡಿಕೊಳ್ಳುವ ನಿಟ್ಟಿನಲ್ಲಿ ಬದುಕಬೇಕಾಗಿರುವುದು ಬಹು ಮುಖ್ಯವಾಗಿರುತ್ತದೆ.

Comments

Popular Posts