1.
ಸಮಾದಾನಗಳೇ ಸಂಪ್ರದಾಯಗಳ ಉದ್ದೇಶ
ಅರಿತವರಿಗದು ಗೊಡ್ಡುತನಗಳ ಸಂದೇಶ,
ನಮ್ಮತನದಲಿ ಮನ ಮುಳಗುವ ಸದುದ್ದೇಶ
ತಿಳಿದು ಕಳೆಯದಿರು ಕಾಲ ಇದು ಸುಸಂದೇಶ!
- ಎಮ್ಮೆಚ್ಚೆ
ವಿಸ್ತ್ರೃತ
ಹಿರಿಯರು ಹಾಕಿರುವ ಕೆಲವು ಸಂಪ್ರದಾಯ ಪದ್ದತಿಗಳು ಮನುಕುಲಕ್ಕೆ ಪೂರಕವಾಗಿರುತ್ತವೆ. ಎಲ್ಲಾ ವಯದ ಎಲ್ಲಾ ರೀತಿಯ ಜನರ ಮನಸನ್ನು ಸಂಪ್ರದಾಯಗಳು ಹಿಡಿದಿಟ್ಟುಕೊಂಡು ಯೋಗ್ಯ ರೀತಿಯ ಕ್ರೀಯಾಶೀಲತೆಗೆ ತಳ್ಳಿ ಜನರುಗಳಲ್ಲಿ ಸಾಮರಸ್ಯದ ಜೊತೆಗೆ ಆನಂದ ಭರಿತರನ್ನಾಗಿಸುತ್ತದೆ. ಇಂಥಹ ಸಂಪ್ರದಾಯಗಳು ನಿರರ್ಥಕವಾದವುಗಳು ಇವುಗಳನ್ನು ನಂಬುವುದು ಮೂಢನಂಬಿಕೆ ಎಂದು ಎಲ್ಲವನ್ನು ತಿಳಿದುಕೊಂಡ ಬುದ್ದಿವಂತರು ಹೇಳುತ್ತಾರೆ. ಈ ಸಂಪ್ರದಾಯಗಳು ಮನುಷ್ಯನಲ್ಲಿ ಅಂಧಕಾರತೆ ಉಂಟು ಮಾಡುವುದರೊಂದಿಗೆ ಕ್ರೀಯಾಶೀಲತೆ ಕುಗ್ಗಿಸುತ್ತದೆ ಎಂದು ತಿಳಿದುಕೊಂಡಿರುತ್ತಾರೆ.
ಹೆಚ್ಚಾಗಿ ತಿಳಿದುಕೊಂಡಿರದ ಅವಿಧ್ಯಾವಂತ ಮುಗ್ದ ಜನರು ಹಿರಿಯರು ಹಾಕಿಕೊಟ್ಟ ಸಂಪ್ರದಾಯಗಳನ್ನು ಪಾಲಿಸುತ್ತ ತಮ್ಮ ಜೀವಂತಿಕೆಯ ಕ್ರೀಯಾಶೀಲತೆಯಿಂದ ಜೀವನ ಸಾಗಿಸುತ್ತಾರೆ. ಇಂಥಹ ಮಾರ್ಗಗಳೇ, ತಮ್ಮನ್ನು ತಾವು ಅರಿತುಕೊಂಡು ಸದ್ಗತಿ ಹೊಂದಲು ಯೋಗ್ಯವಾದವುಗಳೆಂದು ದಾರ್ಶನಿಕರೂ ಹೇಳುವುದು. ಆದರೆ ತಿಳಿದವರು ಇವು ಗೊಡ್ಡು ಸಂಪ್ರದಾಯಗಳೆಂದು ತೆಗಳುತ್ತಲೇ ಕಾಲ ಕಳೆಯುತ್ತಾರೆಯೇ ಹೊರತು ತಳುವಳಿಕೆಯ ಮನಸನ್ನು ಹೇಗೆ ಕ್ರೀಯಾಶೀಲತೆಗೆ ಒಳಪಡಿಸಿಕೊಂಡು ಸದ್ಗತಿ ಕಾಣಬೇಕೆಂದು ಅರಿತುಕೊಂಡಿರುವದಿಲ್ಲ.
ಆದ್ದರಿಂದ ನಾವುಗಳೆಲ್ಲ ನಮ್ಮ ನಮ್ಮ ತಿಳುವಳಿಕೆ ಜೊತೆಗೆ ಯೋಗ್ಯ ರೀತಿಯಲ್ಲಿ ಕ್ರಿಯಾಶೀಲತೆಗೆ ತೊಡಗಿಸಿಕೊಂಡು ನಮ್ಮನ್ನು ನಾವು ಅರಿತುಕೊಂಡು ಜೀವಿಸಿ ಸದ್ಗತಿ ಹೊಂದುವುದು ಶ್ರೇಷ್ಠವಾದುದಾಗಿರುತ್ತದೆ.
2.
ಇದ್ದುದೆಲ್ಲ ಕೂಡಸಿ ತಯಾರಿಸುವದು ನಿರ್ಮಾಣ,
ಜೀವನೋತ್ಸಾಹ ತ್ಯಜಿಸಿಬಿಡುವುದು ನಿರ್ವಾಣ
ಇದ್ದುದೆಲ್ಲ ಇಲ್ಲದಂತಾಗುವದು ನಿರ್ಣಾಮ
ನಂತರವೆ ತಿಳಿಯುವದರದರ ಪರಿಣಾಮ!
- ಎಮ್ಮೆಚ್ಚೆ
ವಿಸ್ತೃತ
ಎಲ್ಲರೀತಿಯ ಯೋಗ್ಯ ಬಿಡಿ ಸ್ವತ್ತುಗಳನ್ನೆಲ್ಲ ಹೊಂದಿಸಿಕೊಂಡು ಏನನ್ನಾದರೂ ತಯಾರಿಸುವಿಕೆ ನಿರ್ಮಾಣವಾಗಿರುತ್ತದೆ. ಇದರ ಕ್ರಿಯೆಗಳು ಒಟ್ಟುಗೂಡಿಸುವಿಕೆಯಾಗಿರುತ್ತದೆ.
ಆದರೆ ಇದಕ್ಕೆ ತದ್ವಿರುದ್ಧವಾಗಿ ಮನುಷ್ಯರು ತಮ್ಮ ಅರಿಷಡ್ ವರ್ಗಗಳನ್ನು ಅಳಿದು, ಜೀವನದಲ್ಲಿ ಬದುಕಬೇಕೆಂಬ ಉತ್ಸಾಹವನ್ನೇ ಕಳಿದುಕೊಂಡು ದೈವದ ನಿರೀಕ್ಷೆಯೆಡೆಗೆ ಸಾಗುವುದೇ ನಿರ್ವಾಣ ಸ್ಥಿತಿಯಾಗಿರುತ್ತದೆ. ಇಲ್ಲಿಯ ಕ್ರಿಯೆಗಳು ಇದ್ದುದನ್ನು ಸ್ವಮನಸಿನಿಂದ ಬಿಟ್ಟುಬಿಡುವದಾಗಿರುತ್ತದೆ. ಇಲ್ಲಿ ತ್ಯಾಗದ ನಿರ್ದಾರವಿರುತ್ತದೆ. ಎಲ್ಲರಿಗೂ
ಸದುಪಯೋಗಕ್ಕಾಗಿಯೇ ಇರುವ ದ್ರವ್ಯಾದಿಗಳನ್ನು ದುರ್ಬುದ್ದಿಯಿಂದ ಸಂಪೂರ್ಣವಾಗಿ ಇಲ್ಲದಂತೇ ಆಗಿಸಿಬಿಡುವುದು ನಿರ್ಣಾಮವಾದುದಾಗಿರುತ್ತದೆ. ಇಲ್ಲಿ ಬುದ್ದಿಹೀನತೆಯಿಂದ ಕಳೆದುಕೊಂಡಂತಹ ಕ್ರಿಯೆ ಜರುಗಿರುತ್ತದೆ.
ಯಾವುದೇ ಘಟನೆಗಳಿರಲಿ ಅವುಗಳು ಜರುಗಿ ಹೋದ ನಂತರವೇ ಅದರಿಂದ ಏನಾಯಿತೆನ್ನುವದು ಪ್ರಾಮಾಣಿಕವಾಗಿ ತಿಳಿದುಬರುತ್ತದೆ. ಘಟನೆಗಳು ಜರುಗದೇ ಇದ್ದ ಪಕ್ಷದಲ್ಲಿ ಆಗುಹೋಗುಗಳ ಬಗ್ಗೆ ಊಹೆಗಳಿಗೆ ಬಲಿಬೀಳಬೇಕಾಗುತ್ತದೆ. ಕಲ್ಪನೆಗಳು ನಿಖರವಾಗಿ ಸತ್ಯದವುಗಳಾಗಿರುವದಿಲ್ಲ. ಆದ್ದರಿಂದ ಜೀವನದಲ್ಲಿ ಪ್ರಾಮಾಣಿಕವಾಗಿ ಬದುಕಬೇಕು. ಇಂದು ನಾವು ಹೇಗಿದ್ದೇವೆಯೋ ಅದು ನಾವು ಹಿಂದೆ ತೆಗೆದುಕೊಂಡ ನಿರ್ದಾರ, ಮುಂದೆ ನಾವು ಹೇಗೆ ಇರುತ್ತೇವೆಯೋ ಅದು ಇಂದು ತೆಗೆದುಕೊಳ್ಳುವ ನಿರ್ದಾರ ಅಂತ ಹಿರಿಯರು ಹೇಳಿದ್ದು.
3.
ಪೆದ್ದ ಹೇಳುವದು ಅಸ್ಪಷ್ಟಮಾತಿನ ನುಡಿಯು
ಕದ್ದ ಕಳವಳ ವಿರದ ನೈಜ ಮನದ ನಡೆಯು,
ಬದ್ಧನಲಿ ತುಂಬಿರುವದು ವ್ಯಾಪಾರಿ ಬುದ್ದಿ
ಎಲ್ಲತನಕ್ಕೂ ಆಂಗ್ಲತನದ್ದೇ ಅವನಿಗೆ ಸುದ್ದಿ!
- ಎಮ್ಮೆಚ್ಚೆ
ವಿಸ್ತೃತ
ಮನೋ ವೈಕಲ್ಯಗಳಿಂದ ಬದಕುವಂತಹ ವ್ಯಕ್ತಿಯ ಮನಸು, ಮಾತು, ಮೈ ಒಂದಕ್ಕೊಂದು ಪೂರಕವಾಗಿ ಸ್ಪಂದಿಸದಿರುವದರಿಂದ ಸಾಮಾನ್ಯ ವ್ಯಕ್ತಿಗಳಿಗಿಂತ ಹಾವಭಾವ, ಮಾತಿನ ವರಸೆಗಳು ಬೇರೆಯಾಗಿರುತ್ತವೆ. ಕೆಲವು ಅಸ್ಪಷ್ಟ ನುಡಿಗಳಿಂದ, ತಪ್ಪು ಉಛ್ಛಾರಣೆಗಳಿಂದ ಕೂಡಿರುವದು ಸಹಜವಾದುದು. ಅಂಥವರು ಏನನ್ನಾದರೂ ಮಾತನಾಡಬೇಕೆಂದರೆ ತಮ್ಮ ಮನಸ್ಸಿಗೆ ಬಂದಂತಹ ಮಾತುಗಳನ್ನು ಯಾವುದೇ ಕಪಟತನಗಳ ಮುಲಾಜಿಲ್ಲದೆ ಆಡಿಬಿಡುತ್ತಾರೆ. ಅವರ ಮಾತುಗಳಲ್ಲಿ ಆಡಂಬರ ಇರದೆ ಅದು ಮನಸಿನ ಸತ್ಯವಾದ ಭಾವನೆಯಾಗಿರುತ್ತದೆ.
ಎಲ್ಲ ಜನರೂ, ವಿದ್ಯಾವಂತರಾಗುವದು ಒಂದು ಮಹಾ ಸಾಧನೆ. ಇಂಥಹವರಿಂದ ಸಮಾಜ ಸುಧಾರಿಸುತ್ತದೆಂಬ ನಿರೀಕ್ಷೆಯಲ್ಲಿ ಲೋಕ ಇರುತ್ತದೆ. ಆದರೆ ದುರದ್ರೃಷ್ಟವಶಾತ್ ವಿದ್ಯಾವಂತರೇ ಹೆಚ್ಚಿನ ಕಪಟಿಗಳಾಗುತ್ತಿದ್ದಾರೆ ವಿದ್ಯೆಯೇ ಅಂಥಹವರಿಗೆ ಜನರನ್ನುಮೋಸಗೊಳಿಸಿ ಕಪಟತನದಿಂದ ಲಾಭ ಮಾಡಿಕೊಳ್ಳಬೇಕೆನ್ನುವ ಸ್ವಾರ್ಥಕ್ಕೆ ಅಸ್ತ್ರವಾಗಿರುತ್ತದೆ. ತಮ್ಮ ಮಾತುಗಳ ಮಧ್ಯದಲ್ಲಿ ಬೇರೆಯವರು ತಿಳಿಯದೆ ಬೆರಗಾಗುವಂತೆ ಬೇರೆಬೇರೆ ಭಾಷೆಗಳಲ್ಲಿ ತಪ್ಪುತಪ್ಪಾಗಿ ಮತನಾಡುತ್ತ, ಒಡೆದು ಆಳುವ ಬುದ್ಧಿಯಿಂದ ಲಾಭ ಮಾಡಿಕೊಳ್ಳುತ್ತಾ ಹೋಗುತ್ತಾನೆ.
ಆದ್ದರಿಂದ ವಿದ್ಯಾವಂತರಾದ ನಾವುಗಳು ಸ್ವಾರ್ಥ ಮನಸಿನವರಾಗದೆ ಸಮಾಜ ಮುಖಿಯಾಗಿ ಬದುಕಬೇಕು.
Comments
Post a Comment
Liked the post? Don't forget to tell us, do comment.