1.
ಹರಿಬಿಟ್ಟರದು ಮನಸು, ನೊವಿನ ವೇದನೆ,
ತೆರೆದಿಟ್ಟರದು ಮೈ, ಭಾದೆಗಳ ರೋಧನೆ,
ಮನ ಮೈಗಳೆಲ್ಲವೂ ಅವರಿಗವರಿಚ್ಚೆ
ಅರಿಯದಿದ್ದರೆ ರೋಗಾದಿಗಳು ಬರುವದು ಹೆಚ್ಚೆ!
- ಎಮ್ಮೆಚ್ಚೆ
ವಿಸ್ತ್ರೃತ
ಮನುಷ್ಯರಾದವರು ತಮ್ಮ ವಾಂಚೆ(ಮನದಿಂಗಿತ)ಗಳನ್ನು ಹಿಡಿತದಲಿಟ್ಟುಕೊಳ್ಳಬೇಕು. ಮನಸೆನ್ನುವದು ಮಯಾಜಿಂಕೆಯಿದ್ದಂತೆ ಎತ್ತ ಓಡುತ್ತದೆಯೋ ಗೊತ್ತಿಲ್ಲ. ಓಡುವ ಮನಸಿಗೆ ಕಡಿವಾಣ ಹಾಕಬೇಕು. ಈ ಮನಸಿನ ನಿಯಂತ್ರಣಕ್ಕಾಗಿಯೇ ಜ್ಞಾನಿಗಳು ಸಾಕಷ್ಟು ಸ್ವ ಅನುಭವದ ಮಾರ್ಗಗಳನ್ನು ತಿಳಿಸಿಕೊಟ್ಟಿದ್ದಾರೆ. ಅದನ್ನು ತಿಳಿದುಕೊಂಡು ಮನದ ಓಟಕ್ಕೆ ನಿಯಂತ್ರಣತಂದು ಸನ್ಮಾರ್ಗದತ್ತ ಸಾಗಬೇಕು. ನಿಯಂತ್ರಣವಿಲ್ಲದ ಮನಸು ಎಲ್ಲಿ ಮುಟ್ಟುತ್ತದೆಯೋ ಗೊತ್ತಿಲ್ಲ. ಮನಸಿನ ಬೆನ್ನು ಹತ್ತಿದವರು ಯಾರೂ ನೆಮ್ಮದಿಯುತವಾಗಿರಲು ಸಾಧ್ಯವೂ ಇಲ್ಲ. ಮನಸು ಓಡಿದಂತೆಲ್ಲ ನೋವಿನ ಸರಮಾಲೆಯಲ್ಲಿಯೇ ಸುತ್ತಿಕೊಳ್ಳಬೇಕು ಎನ್ನುವದನ್ನು ಕೆಲವರು ತಿಳಿದುಕೊಳ್ಳುವುದೇ ಇಲ್ಲ. ಇದನ್ನು ಸರಿಯಾದ ರೀತಿಯಿಂದ ನಿಯಂತ್ರಿಸದಿದ್ದವರು ಕೊನೆಗೆ ಕ್ಷಣ ಕ್ಷಣವೂ ತಮ್ಮ ಜೀವನವನ್ನು ನೋವುಗಳಲ್ಲಿಯೇ ಕಳೆಯಬೇಕಾಗುತ್ತದೆ.
ಅದರಂತೆಯೇ ಕೊಬ್ಬುವ ಈ ದೇಹವನ್ನೂ ನಿಯಂತ್ರಣದಲ್ಲಿ ಇಟ್ಟುಕೊಳ್ಳಲೇಬೇಕು. ದೇಹದ ಮದ ಯಾರನ್ನು ಯಾವ ಹಂತಕ್ಕೆ ತಲುಪಿಸುತ್ತದೆಂದು ಯಾರಿಗೂ ಗೊತ್ತಿಲ್ಲ. ಈ ರೀತಿಯಾಗಿ ದೇಹವನ್ನು ಹರಿಬಿಟ್ಟವರು ಸಮಾಜದ ಜನರ ವೈರತ್ವದೊಂದಿಗೆ ದುಷ್ಟರಾಗಿ ಸಾಕಷ್ಟು ನೋವು ಅನುಭವಿಸಬೇಕಾಗುತ್ತದೆ. ದೇಹವನ್ನು ಸದ್ರೃಢವಾಗಿಸಿಕೊಂಡು ಸದುಪಯೋಗ ಪಡಿಸಿಕೊಳ್ಳಬೇಕು. ಬೇಕಾಬಿಟ್ಟಿ ಉಪಯೋಗಿಸಿದಲ್ಲಿ ಪರರಿಂದ ಹೆಚ್ಚು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
ಮನಸ್ಸು ಮತ್ತು ದೇಹಗಳು ಪ್ರತಿಯೊಬ್ಬರಿಗೂ ಸ್ವತಂತ್ರವಾಗಿದ್ದು ಅವುಗಳ ಸದ್ಬಳಕೆ ಮತ್ತು ನಿಯಂತ್ರಣಗಳು ಅವರ ಸ್ವಂತಕ್ಕೇ ಸಂಬಂಧಿಸಿದ್ದವುಗಳಾಗಿರುತ್ತವೆ. ಈ ಜಗತ್ತಿನಲ್ಲಿ ಯಾರಿಗೆ ಏನು ಬೇಕೋ ಎಲ್ಲವುಗಳೂ ಇಲ್ಲಿವೆ. ಅವುಗಳ ಆಯ್ಕೆ ಮಾತ್ರ ಅವರವರ ಸ್ವಂತಕ್ಕೆ ಒಳಪಟ್ಟುದಾಗಿರುತ್ತದೆ. ಇಂಥವುಗಳನ್ನು ತಿಳಿದುಕೊಂಡು ಬದುಕುವುದು ಅವರವರಿಗೇ ಬಿಟ್ಟದ್ದಾಗಿರುತ್ತದೆ. ಮನಸ್ಸು ಹಾಗೇ ದೇಹವನ್ನು ಪ್ರತಿಯೊಬ್ಬರೂ ತಿಳಿದುಕೊಂಡು ನಿಯಂತ್ರಣ ಹೇರಿ ಸೂಸ್ಥಿತಿಯಿಂದ ಇಟ್ಟುಕೊಳ್ಳುವದು ಅವರವರದೇ ಜವಾಬ್ದಾರಿ ಯಾಗಿರುತ್ತದೆ. ಇಲ್ಲದಿದ್ದಲ್ಲಿ ನಾನಾತರಹದ ಔಷದಿಗಳಿಲ್ಲದ ರೋಗಕ್ಕೆ ತುತ್ತಾಗಿ ಜೀವ ಕಳೆದುಕೊಳ್ಳುವದರೊಂದಿಗೆ ನಮ್ಮನ್ನು ನಂಬಿದ ಕುಟುಂಬದವರನ್ನೂ ತೊಂದರೆಗೆ ನೂಕುತ್ತಾರೆ.
ಆದ್ದರಿಂದ ಪ್ರತಿಯೊಬ್ಬರೂ ಸಂಸಾರಿಕ ಜವಾಬ್ದಾರಿಗಳೊಂದಿಗೆ ಮೈ ಮನಗಳ ಹೊರ ಬಳಕೆಯ ನಿಯಂತ್ರಣದಿಃದ ಕುಟುಂಬದ, ಸಮಾಜದ ಸ್ವಾಸ್ಥ್ಯ ಕಾಪಾಡುವದು ಶ್ರೇಷ್ಠವಾದುದಾಗಿರುತ್ತದೆ.
2.
ಕಡಿಮೆ ಬೆಳಕಿನ ನೋಟ
ಕತ್ತಲೆಯ ಘೋರಾಟ,
ಕತ್ತಲೆ ಕಳೆಯುವ ಕಾಟ
ಬೆಳಕಿನದೇ ಆರ್ಭಟ!
- ಎಮ್ಮೆಚ್ಚೆ
ವಿಸ್ತೃತ
ನಾವು ಏನೇನನ್ನೋ ಗ್ರಹಿಸಿಕೊಂಡು ಹಗಲು-ರಾತ್ರಿ, ಕತ್ತಲು-ಬೆಳಕುಗಳು ಬೇರೆ ಬೇರೆಯವುಗಳೆಂದು ತಿಳಿದಿದ್ದೇವೆ. ಅವು ಚಲನೆಯ ಸಮ ಸ್ಥಿತಿಗಳೆಂದು ತಿಳಿದಿಯೇ ಇಲ್ಲ. ಇದ್ದ ಬೆಳಕಿನಲ್ಲಿ ಬೆಳಕು ಸ್ವಲ್ಪ ಕಡಿಮೆಯಾದರೂ ಕತ್ತಲಾಯಿತೆನ್ನುತ್ತೇವೆ. ಆದರೆ ಬೆಳಕು ಸ್ವಲ್ಪ ಕಡಿಮೆಯಾಯಿತು ಅನ್ನುವದಿಲ್ಲ. ನಿಜವಾಗಿಯೂ ಸ್ರೃಷ್ಠಿಗೆ ಬೆಳಕು ಕತ್ತಲೆಗಳಿಲ್ಲ. ನಮ್ಮ ಕಣ್ಣ ಗ್ರಹಿಕೆಯ ಸಾಧ್ಯತೆಗಳ ಮೇಲೆ ಕತ್ತಲೆ ಬೆಳಕುಗಳು ನಿರ್ಮಿತವಾಗಿವೆ.
ಸ್ರೃಷ್ಠಿಗೆ ಕತ್ತಲು ಬೆಳಕು ಸಮ ಸ್ಥಿತಿಗಳಾದರೂ ಸಹ ಜನರು ಬೆಳಕು ಒಳ್ಳೆಯದು, ರಾತ್ರಿ ಅನ್ನುವದು ಕೆಟ್ಟ, ನಿಷಿದ್ಧದಾಯಕವಾದುದು ಹೀಗೆ ಏನೇನೋ ತಪ್ಪು ಕಲ್ಪನೆಗಳನ್ನು ತಿಳಿದವರೇ ಹೆಚ್ಚಾಗಿರುತ್ತಾರೆ.
ಹೆಚ್ಚು ಹೆಚ್ಚು ಬೆಳಕನ್ನು ನೊಡುತ್ತ ಅಕ್ಷಿಪಟಲದ ಸಾಮರ್ಥ್ಯ ಕಣ್ಣು ಕಳೆದುಕೊಂಡಿವೆ. ಯಾವುದೇ ಬೆಳಕಿರದೇ ಕತ್ತಲಾದಾಗಲೂ ಕೆಲ ಸಮಯದಲ್ಲಿ ನಮ್ಮ ಕಣ್ಣುಗಳು ಕಾಣಲು ಪ್ರಾರಂಭಿಸುತ್ತವೆ. ಹಗಲು ಬೆಳಕಿನಲ್ಲಿ ಗೋಚರಿಕೆಯದೆಲ್ಲವೂ ರಾತ್ರಿ ಕತ್ತಲಲ್ಲೂ ಗೋಚರಿಸುತ್ತವೆ. ಹಗಲು ರಾತ್ರಿಗಳಿಗೆ ಯಾವುದೇ ಬೇಧಭಾವ ಇಲ್ಲ.
ಇವು ಎರಡಕ್ಕೂ ಯಾವುದೇ ವ್ಯತ್ಯಾಸವಿಲ್ಲವೆಂದು ತಿಳಿದರೂ ಸಹ ಸ್ವಲ್ಪವೇ ಸ್ವಲ್ಪ ಬೆಳಕು ಬಂತೆಂದರೂ ಕತ್ತಲೆ ಮಾಯವಾಗಿ ಬಿಡುತ್ತವೆ. ಬೆಳಕು ಎಲ್ಲರನ್ನೂ ಅಜ್ಞನಕಳೆದು ಉಲ್ಲಸಿತರನ್ನಾಗಿಸುತ್ತದೆ. ಎಲ್ಲ ಬೀಗುವಿಕೆಯ ಆರ್ಭಟ ಜೋರಾಗಿರುತ್ತದೆ.
3.
ಕೃತಕ ವರ್ಣದ ಮುಖವು
ಕಾಗೆಗೆ ಬಳಿದ ಸುಣ್ಣ,
ಒಳ ಮನದ ಹೇಸಿತನವು
ಸಾರಿಸಿದ ಕರಿಬಣ್ಣ!
- ಎಮ್ಮೆಚ್ಚೆ
ವಿಸ್ತೃತ
ಅಲ್ಲ ಸಲ್ಲದ ನಾನಾತರಹದ ವಸ್ತುಗಳನ್ನು ಕೇವಲ ಚರ್ಮ ಬೆಳ್ಳಗಾಗಲಿ ಎನ್ನುವದಕ್ಕೊಸ್ಕರ ಬಳೆದುಕೊಳ್ಳುತ್ತಾರೆ.
ಶ್ರೃಂಗಾರಿಕೆಯ ಮೂಲ ಉದ್ದೇಶ ಕಾಂತಿಯುತಗಾಗಿ, ಆಕರ್ಷಕವಾಗಿ ಕಾಣುವುದು. ಅದು ಚರ್ಮದ ವರ್ಣ ಬದಲಿಸಿಕೊಳ್ಳುವುದರವರೆಗೆ ಹೋಗಿದೆ. ಮನುಷ್ಯ ಸುಂದರವಾಗಿ ಕಾಣಬೇಕೆಂದರೆ, ತನ್ನ ಅಂಗಾಂಗ, ವೇಷಭೂಷನಗಳು ಆಕರ್ಷಿತವಾಗಿ, ಕಾಂತಿಯುಕ್ತವಾಗಿರಬೇಕು. ಯಾವ ಕ್ರೃತಕತೆಯಿಂದಲೂ ನೈಜತೆಯನ್ನು ಧೀರ್ಘಕಾಲ ಉಳಿಸಿಕೊಳ್ಳಲಾಗುವದಿಲ್ಲ. ಕೇವಲ ನಮ್ಮ ನಿರಂತರ ಸಾತ್ವಿಕ ಕೆಲಸ ಹಾಗೂ ಅಂಗ ಸಾಧನೆಗಳು, ಕ್ರಮಬದ್ಧ ಆಹಾರ ಸೇವನೆಗಳು ಮಾತ್ರ ನಮ್ಮ ದೇಹ ಕಾಂತಿಯನ್ನು ಆರೋಗ್ಯದೊಂದಿಗೆ ಒದಗಿಸಬಲ್ಲವು. ಸೌಂದರ್ಯದ ಸಲುವಾಗಿಯೇ ಆಯುರ್ವೇದ ಪದ್ಧತಿಯಲ್ಲಿ ಸಾಕಷ್ಟು ವಸ್ತುಗಳಿದ್ದರೂ ಜನರು ಬಗೆಬಗೆಯ ರಾಸಾಯನಿಕ ವಸ್ತುಗಳನ್ನು ಬಳಸುತ್ತಾರೆ. ತಜ್ಞರ ಸಲಹೆಯಿಲ್ಲದೆ ವ್ಯತಿರಿಕ್ತ ಪರಿಣಾಮ ಉಂಟಾಗಿ ಇದ್ದ ಸೌಂಧರ್ಯವನ್ನೂ ಕಳೆದುಕೊಳ್ಳುತ್ತಾರೆ. ಜೊತೆಗೆ ದೈಹಿಕ ರೋಗಗಳನ್ನೂ ಪಡೆದುಕೊಳ್ಳುತ್ತಾರೆ.
ಹೊರ ರೂಪಗಳಿಂದ ಮನುಷ್ಯರ ಒಳ್ಳೆಯತನ ಅಳಿಯಲಾಗುವದಿಲ್ಲ. ಮನದಲ್ಲಿ ಒಳ್ಳೆಯಗುಣಗಳಿದ್ದರೆ ಮಾತ್ರ ಒಳ್ಳೆಯವರೆನಿಸಿಕೊಳ್ಳುತ್ತಾರೆ. ಬಹಳ ಜನರು ತಮ್ಮ ಹೊರ ರೂಪ ಸೌಂದರ್ಯಗಳಿಂದ ಒಳಗಿನ ಕೆಟ್ಟ ಗುಣಗಳು ಮರೆಮಾಚುತ್ತವೆಂದು ತಿಳಿದಿರುತ್ತಾರೆ. ಆದರೆ ಹೊರಗಿನವರಿಗೆಲ್ಲ, ಇವರು ನೊಡಲು ಚನ್ನಾಗಿ ಕಾಣುತ್ತಾರೆ ಅದರೆ ಒಳ ಮನದತುಂಬ ಹುಳುಕುಗಳೇ ತುಂಬಿವೆ ಎಂದು ಚನ್ನಾಗಿ ತಿಳಿದಿರುತ್ತಾರೆ. ಅಂಥವರಿಗೆ ಪ್ರಾಮಾಣಿಕ ಗೌರವವನ್ನು ಕೊಡುವದಿಲ್ಲ.
ಆದ್ದರಿಃದ ಬಾಹ್ಯ ಸೌಂದರ್ಯವನ್ನು ಆರೋಗ್ಯಕರವಾಗಿ ಹೆಚ್ಚು ಪಡಿಸುವದಕ್ಕೂ ಹೆಚ್ಚು ಒಳ ಮನಗಳ ಸೌಂದರ್ಯವನ್ನು ಹೆಚ್ಚಿಸಿಕೊಂಡು ದೇಹಕಾಂತಿ, ವರ್ಚಸ್ಸುಗಳ ಜೊತೆಗೆ ಬದಕುವುದು ಶ್ರೇಷ್ಠವಾದುದು.
Comments
Post a Comment
Liked the post? Don't forget to tell us, do comment.