1
ರಾಗ ಬಯಸಿದವನಾದ ಭೋಗಿ
ಭೋಗ ಬಳಸಿದವ ಆಗುವನು ರೋಗಿ,
ತ್ಯಾಗ ಬಳಸಿದವನಾದ ಯೋಗಿ
ಯೋಗ ಬಳಸಿಧವನಾದ ಶಿವಯೋಗಿ!
                                                            - ಎಮ್ಮೆಚ್ಚೆ
ವಿಸ್ತೃತ
   ಮನೋಲಾಲಸೆಗಳನ್ನು ಈಡೇರಿಸಿಕೊಳ್ಳಬೇಕು ಎನ್ನುವವರು ಭೊಗದಲ್ಲಿರಲು ಇಚ್ಛೆಪಡುತ್ತಾರೆ. ತಮ್ಮ ಚಪಲಿತ ಮನೋ ವಿಷಯಾಸಕ್ತಿಗಳನ್ನು ಅನುಭವಿಸಿ ಆನಂದ ಪಡೆದುಕೊಳ್ಳುತ್ತಾರೆ. ಈ ಸ್ಥೀಮಿತತೆ ಇರದ ಮನೋಉಲ್ಲಾಸಿತ ಅನುಭವಿಸುವಿಕೆ ದೇಹ ಮತ್ತು ಮನಸನ್ನು ನಿಷ್ಕ್ರಿಯಗೊಳಿಸುತ್ತ ಅನಾರೋಗ್ಯತೆಯಿಂದ ಬಳಲುವಂತೆ ಮಾಡುತ್ತದೆ.
    ಸ್ವಾರ್ಥ ಗುಣವನ್ನು ಬಿಟ್ಟು ತ್ಯಾಗ ಗುಣಗಳನ್ನು ಬೆಳಸಿ ಬಳಸಿಕೊಂಡು ಹೋಗುವುದಕ್ಕೆ ಮಾನವರಿಗೆ ಸಮಾಜದಲ್ಲಿ ಉನ್ನತ ಗೌರವವಿರುತ್ತದೆ. ಈ ತ್ಯಾಗ ಗುಣವನ್ನು ಹೆಚ್ಚು ಹೆಚ್ಚು ಬೆಳಸಿಕೊಂಡು ಹೋದಂತೆಲ್ಲ ಸಮಾಜಕ್ಕೆ ಒಳ್ಳೆಯದಾಗುತ್ತದೆಯೇ ಹೊರತು ಕೆಡುಕಾಗುವದಿಲ್ಲ. ಇದನ್ನು ಹೆಚ್ಚು ಉಪಯೋಗಿಸಿಕೊಂಡವರು ಯೋಗಿ ಮಹಾತ್ಮರುಗಳಾಗುತ್ತಾರೆ. ಈ ಯೋಗಿ ಮಹಾತ್ಮರಾಗುವುದನ್ನೇ ಅಳವಡಿಸಿಕೊಂಡು ಪಡೆದು ಕೊಳ್ಳುವುದೇ ಶಿವಯೋಗತ್ವ. ಆದ್ದರಿಂದ ಎಲ್ಲರೂ ತ್ಯಾಗ ಗುಣಗಳನ್ನು ಅಳವಡಿಸಿಕೊಂಡು ಶಿವಯೋಗಿಗಳಾಗಬೇಕು.

2.
ಪ್ರೀತಿ ಅದು ಆಯಾಮಗಳ ಕೊರತಿ
ರೀತಿಗೆ  ಪರಿತಪಿಸುವಿಕೆಯ ಭೀತಿ,
ಹೇಳುವವಗೆ ಹೇತು ಹೆಚ್ಚಿನ  ನೀತಿ
ಬಿದ್ದವಗೊ ಎದ್ದೇಳಲಾರದ ಪಜೀತಿ!
                                               - ಎಮ್ಮೆಚ್ಚೆ

ವಿಸ್ತೃತ
 ಪ್ರೀತಿ ಪ್ರತಿಯೊಬ್ಬರಿಗೂ ಇರಲೇ ಬೇಕು. ಪ್ರೀತಿ ಎಂದರೆ ನಾಲ್ಕಾರು ಶಬ್ದಗಳಲ್ಲಿ ಸರಳವಾಗಿ ಹೇಳುವದಲ್ಲ. ಅದು ತರತರಹದ ಆಯಾಮಗಳನ್ನು ಪಡೆದುಕೊಂಡಿದೆ. ಅಂದರೆ ಪ್ರಾಥಮಿಕ ಹಂತದ ಪ್ರೀತಿ ತೀವ್ರತೆ ಪಡೆದು ಕೊಂಡಂತೆಲ್ಲ ಬೇರೆಬೇರೆ ರೂಪಗಳನ್ನು ಪಡೆದುಕೊಳ್ಳುತ್ತ ಹೋಗುತ್ತದೆ. ಮಕ್ಕಳ ಮೇಲಿನ ಪ್ರೀತಿ ಮಮತೆ ಅನಿಸಿ ಕೊಂಡರೆ, ಚಿಕ್ಕವಯದವರ ಪ್ರೀತಿ ಆಕರ್ಷಣೆಯಾಗಿರುತ್ತದೆ. ಹದಿವಯದವರ ಪ್ರೀತಿ ಪ್ರೇಮಕ್ಕೆ ಜಾರುತ್ತದೆ. ತಂದೆ-ತಾಯಿ, ಹಿರಿಯರ ಮೇಲಿನ ಪ್ರೀತಿ ಗೌರವಗಳತ್ತ ಸಾಗಿದರೆ, ದೇವರ ಮೇಲಿನ ಪ್ರೀತಿ ಭಕ್ತಿಯತ್ತ ಹೋಗುತ್ತದೆ. ಹೀಗೆ ಪ್ರತಿಯೊಬ್ಬರೂ ಪ್ರೀತಿಯ ಅಪೇಕ್ಷಕರೆ ಆಗಿರುತ್ತಾರೆ. ಆದರೆ ಯಾವರೀತಿ ಅನ್ನುವುದು ಅವರವರಿಗೇ ಬಿಟ್ಟದ್ದು. ಸ್ವಾಭಾವಿಕ ಚಿಕ್ಕ ಹಾಗೂ ಹದಿವಯದ ಪ್ರೀತಿಯನ್ನು ಹೊರತು ಪಡಿಸಿ ಬೇರೆ ಯಾವ ತರಹದ ಪ್ರೀತಿ ಉನ್ಮಾದತೆ ಖೇಡುಂಟು ಮಾಡಲಾರದಂತಹುಗಳಾಗಿರುತ್ತವೆ. ಎಲ್ಲತರಹದ ಪ್ರೀತಿಗಳು ಪ್ರೀತಿಗಳೆ ಆದರೂ ಸಹ ಸಾಮಾಜಿಕ, ಕಾನೂನಾತ್ಮಕ ಸಮ್ಮತಿಗಳ ಜೊತೆಗೆ ಸ್ವಸ್ಥ ಚಿತ್ತರಾಗಿರಬೇಕು, ತಮ್ಮ ಭಾವೀ ಜೀವನದ ನೈಜ ಪರಿಕಲ್ಪನೆ ಉಳ್ಳವರಾಗಿರಬೇಕು. ನಂಬಿಕೆ ಸತ್ಯವಾದುದಾಗಿರಬೇಕು. ಚಿಕ್ಕ ವಯದವರ ಪ್ರೀತಿ ಬಹಳ ಸಾರಿ ಸಾಂದರ್ಭಿಕ ಆಕರ್ಷಣೆಯದಾಗಿರುತ್ತದೆ. ಭಾವೀ ಜೀವನಕ್ಕೆ ಸಂಬಂಧಪಟ್ಟ ನಿಶ್ಚಿತ ಖಚಿತ ಉದ್ದೇಶವಿರುವದಿಲ್ಲ. ಇಂಥವರು ಭ್ರಮಾದೀನತೆಯಿಂದ ಮನೆತನ ಹಾಗೂ ಸಮಾಜವನ್ನೂ ಲೆಕ್ಕಿಸದವರಾಗಿರುತ್ತಾರೆ. ಅಂಥವರ ಪ್ರೀತಿಯಲ್ಲಿ ಖಚಿತತೆ ಇರಲಾರದ್ದಕ್ಕೆ ಎಲ್ಲವನ್ನೂ ಎದುರಿಸದ ಅಭದ್ರತೆಯಿಂದ ಬೇರೆ ಜನರನ್ನು ನೋಡಿ ಭೀತಿಗೆ ಒಳಪಡುತ್ತಿರುತ್ತಾರೆ. ಇಂಥಹ ಸಮಯಗಳಲ್ಲಿಯೇ ಸಮಾಜದಲ್ಲಿ ಬಹಳಷ್ಟು ಜನ ಉಪದೇಶ ಹೇಳುವ ಹಿರಿಯರಾಗುತ್ತಾರೆ ಮತ್ತೂ ಮುಂದುವರೆದು ತಮ್ಮ ಕೆಟ್ಟತನದ ಲಾಭದಾಯಕ ಉದ್ದೇಶಗಳನ್ನೂ ಪಡೆದುಕೊಳ್ಳುವ ಮನಸ್ಥಿತಿಯವರಾಗಿರುತ್ತಾರೆ. ಕೆಟ್ಟದ್ದನ್ನು ಇನ್ನೂ ಹೆಚ್ಚು ಕೆಡಿಸಬೇಕೆಂಬ ಇಛ್ಛೆ ಹೊಂದಿರುತ್ತಾರೆ. ಇತ್ತ ಇಂಥ ಪ್ರೀತಿಯ ಸುಳಿಯಲ್ಲಿ ಸಿಕ್ಕಿರುವಂತಹವರು ತರತರಹದ ಅಪ್ರಬುದ್ಧ ಜನರ ಸಲಹೆಗಳನ್ನು ಕೇಳುತ್ತ ಬುದ್ದಿಹೀನತೆ ಪಡೆದುಕೊಳ್ಳುತ್ತ ಬಲಿಪಶುಗಳಾಗುತ್ತ ಹೋಗುತ್ತಾರೆ. ಕೆಲ ಕಾಲದವರೆಗೆ ಝಳಪಿಸುತ್ತ ಹೋಗುವ ಪ್ರೀತಿ ಜೀವನ ಲಯದ ನೈಜತೆಯೊಂದಿಗೆ ಹೊಂದಿಕೊಳ್ಳಲಾರದೆ  ಬಿರುಕುಗಳು ಉಂಟಾಗಿ ಸುಧಾರಿಸದ ಮಟ್ಟಕ್ಕೆ ಹೋಗಿ ಅಂತ್ಯ ಕಾಣುತ್ತಾರೆ.
   ಈ ಜಗತ್ತನ ಸಕಲ ಜೀವಜಂತುಗಳಿಗಿಂತಲೂ ಹೆಚ್ಚಿನ ಬುದ್ದಿವಂತಿಕೆಯ ಜೀವಿ ಮನುಷ್ಯರಾಗಿ ಈ ಭೂಮಿಯ ಮೇಲೆ ಬದುಕಿದ್ದಕ್ಕೆ ಹೆಮ್ಮೆ ಪಡುವುದರೊಂದಿಗೆ ಈ ಸಮಾಜದಲ್ಲಿ ವಯೋಮಾನದ ನೈಜ ಪರಿಕಲ್ಪನೆಯೊಂದಿಗೆ ಬಾಳಿನಾನುಭವಗಳನ್ನು ತಿಳಿದುಕೊಂಡು ತಮ್ಮ ಸುಂದರವಾದ ಬದುಕು ರೂಪಿಸಿಕೊಂಡು ಬಾಳಿ ಬದಕುವದು ಮಹತ್ವವಾದುದು. ಆಕರ್ಷಣೆಗೆ ಒಳಗಾಗಿ ಬುದ್ದಿಶೂನ್ಯತೆಯಿಂದ ನಿರ್ಧಾರ ತೆಗೆದುಕೊಂಡು ನಾಶಹೊಂದುವದು ಸರಿಯಾದ ನಿರ್ಧಾರವಲ್ಲ.

3.
ಬೆದರಿದರೆ ಬೆನ್ನುಹತ್ತಿ ಕಾಡೀತು ಭಾದೆ
ಮನಸಿದ್ದರೆ ಮಾರ್ಗಸಿಗುವದದು ಗಾದೆ.
ಹೆದರಿದರೆ ಮನೆಗೇ ಬಂದೀತು ವ್ಯಾದಿ
ಇಲ್ಲದ್ದಕ್ಕೆ ತಗೆಯಬಾರದು ಖಾಲಿ ತಗಾದಿ!
                                                                   - ಎಮ್ಮೆಚ್ಚೆ

ವಿಸ್ತ್ರೃತ
    ಎಂಥಹ ಪ್ರಸಂಗಗಳಲ್ಲಿಯೇ ಆಗಲಿ ತನ್ನ ಆತ್ಮ ಸ್ಥೈರ್ಯವನ್ನು ಕಳೆದುಕೊಳ್ಳಬಾರದು. ಅದರಲ್ಲೂ ದೈಹಿಕ ರೋಗಗಳು ನಮ್ಮ ಹೆದರಿಕೆ, ಅವ್ಯಕ್ತ ಭಯಗಳಿಂದಲೇ ಹೆಚ್ಚಾಗುತ್ತ ಹೋಗುತ್ತವೆ. ಸರಿಯಾಗಿ ವೈದ್ಯಕೀಯ ನಿಯಮಗಳನ್ನು ಸರಿಯಾಗಿ ತಿಳಿದುಕೊಂಡು ಬಂದುದನ್ನು ಬಂದಂತೆಯೇ ಎದುರಿಸಿ ಬದುಕುತ್ತೇನೆ ಎನ್ನುವವರು ಬಾದೆಗಳು ದೂರಸರಿದು ಆರೋಗ್ಯದತ್ತ ಹೊಗುತ್ತಾರೆ. ಹಾಡಿ ಹಾಡಿ ರಾಗ, ಉಗುಳಿ ಉಗುಳಿ ರೋಗ ಎನ್ನುವಂತೆ ಹೆದರಿ ಬೆದರಿ ಬಾದೆ  ಎನ್ನುವಂತಾಗಿದೆ. ವೈದ್ಯಕೀಯದ ಪ್ರಕಾರವೂ ಭಯದಿಂದಲೇ ರೋಗಗಳು ಉತ್ಪತ್ತಿಯಾಗುತ್ತವೆ ಹಾಗೂ ಉಲ್ಭನಗೊಳ್ಳುತ್ತವೆ.
    ಪ್ರತಿಯೊಬ್ಬರಿಗೂ ಜೀವ ಎನ್ನುವುದು ಬಲು ಅಮೂಲ್ಯವಾದುದು. ಅದರೊಂದಿಗೆ ಜೀವನವೂ ಅತೀ ಅಮೂಲ್ಯವಾದುದಾಗಿರುವದರಿಂದ ನಾವು ಸ್ವಸ್ಥ ಜೀವನದ ದೃಷ್ಠಿಯಿಂದ ಬಲ್ಲವರುಗಳು ಹಾಕಿದ ನಿಬಂಧನೆಗಳನ್ನು ಚಾಚುತಪ್ಪದೆ ಪಾಲಿಸುವ ನಿರ್ದಾರದೊಂದಿಗೆ ಗಟ್ಟಿ ಮನಸ್ಸು ಮಾಡಿದಲ್ಲಿ ಎಂಥಹ ಘೋರ ಜಾಡ್ಯಗಳನ್ನೂ ಹೋಗಲಾಡಿಸಬಹುದು.
  ನಾವು ಈ ಜಂಜಡದ ಜಗತ್ತಿನಲ್ಲಿ ಬದುಕಬೇಕೆಂದರೆ ಸಾಕಷ್ಟು ವಿನಾಕಾರಣ ತೊಂದರೆಗಳನ್ನು ಎದುರಿಸುತ್ತೇವೆ. ಅಂತಹ ಸಮಸ್ಯೆಗಳನ್ನು ತತ್ಕ್ಷಣವೇ ಯೋಗ್ಯ ನಿರ್ಧಾರಗಳೊಂದಿಗೆ ಪರಿಹರಿಸಿಕೊಳ್ಳುವ ಜ್ಞಾನವನ್ನು ಪಡೆದುಕೊಂಡಿದ್ದರೆ ಯಾವ ಸಮಸ್ಯೆಗಳೂ ಮುಂದುವರೆಯದೆ ಅಲ್ಲಿಗಲ್ಲಿಗೇ ಮುಕ್ತಾಯಗೊಂಡು ಬಿಡುತ್ತವೆ.
   ಹಾಗೆಂದು ಅನ್ಯಾಯಗಳನ್ನೆದುರಿಸುವ ಹುಸಿ ನೆಪದಲ್ಲಿ ತಾನೂ ಇನ್ನೊಬ್ಬರ ಸ್ವಾತಂತ್ರಗಳನ್ನು ಹರಣ ಮಾಡುವ ದಬ್ಬಾಳಿಕೆಯನ್ನು ಮಾಡಬಾರದು. ಉಪಯೋಗ ವಿಲ್ಲದ ದೊಡ್ಡಸ್ಥಿತಿಗಾಗಿಯೇ ಕೆಲವರು ಇನ್ನೊಬ್ಬರೊಂದಿಗೆ ಅನುಚಿತವಾಗಿ ನಡೆದುಕೊಂಡು ಪರರಿಗೆ ತೊಂದರೆ ಕೊಡುವುದರೊಂದಿಗೆ ತಾವೂ ಅಪಾಯಕ್ಕೆ ಒಳಗಾಗುತ್ತಾರೆ.
    ಆದ್ದರಿಂದ ಎಲ್ಲರೂ ಎಲ್ಲರೊಂದಿಗೆ ಸಹಕಾರದಿಂದ, ಕಾನೂನು ಪಾಲಕರಾಗಿ ಧನಾತ್ಮಕ ರೀತಿಯಿಂದ ಧೈರ್ಯವಂತರಾಗಿ ಆರೋಗ್ಯದಿಂದ ಬದುಕುವುದು ಒಳ್ಳೆಯದು.

Comments

Popular Posts