1.
ಸಾತ್ವಿಕರ ಆ ಸಿಟ್ಟು
ಹಾಕೀತೆಲ್ಲವ ಸುಟ್ಟು,
ವಂಚಕರ ಕಡು ಕೋಪ
ಹೇಸಿ ಲಾಭದಕಡೆಗೇ ಪಾಪ!
- ಎಮ್ಮೆಚ್ಚೆ
ವಿಸ್ತೃತ
ಒಳ್ಳೆಯ ರೀತಿಯಿಂದ ಜೀವನ ಸಾಗಿಸುವ ಸಂಭಾವಿತರಿಗೆ ಬೇಗ ಕೊಪ ಬರುವದಿಲ್ಲ. ಒಂದೊಮ್ಮೆ ಅಂಥವರಿಗೆ ಕೋಪ ಬಂತೆಂದರೆ ಬೇಗ ನಿಯಂತ್ರಣಕ್ಕೆ ಬರುವದಿಲ್ಲ. ನಿರ್ಧಿಷ್ಟ ವಿಷಯಕ್ಕೆ ಬಂದ ಕೊಪ, ಸಮಸ್ಯೆ ಪರಿಹಾರದ ವರೆಗೂ ಶಾಂತತೆ ಕಾಣುವದಿಲ್ಲ. ಸಮಸ್ಯೆ ಪರಿಹಾರಕ್ಕಾಗಿ ಏನು, ಎಷ್ಟು ಹಾಳಾಗುತ್ತದೆಂಬ ವಿಚಾರ ಇರುವದಿಲ್ಲ. ಇದಕ್ಕಾಗಿ ಎಷ್ಟೇ ಹಾನಿಯಾದರೂ, ತೊಂದರೆಯಾದರೂ ಹೆದರುವದಿಲ್ಲ. ಆವರ ಉದ್ದೇಶ ಬಂದ ಸಮಸ್ಯೆಗಳನ್ನು ಎದುರಿಸುವದಾಗಿರುತ್ತದೆ.
ಅದೇ ಕೋಪ ವಂಚಕರಿಗೆ ಬಂತೆಂದರೆ ಬಹಳ ಕಾಲದವರೆಗೆ ನಿರ್ಧಿಷ್ಟತೆ ಇರುವದಿಲ್ಲ. ಅಂಥವರ ಮುಖ್ಯ ಉದ್ದೇಶ ವಂಚನೆಯಿಂದ ಲಾಭ ಮಾಡಿಕೊಳ್ಳುವದಷ್ಟೇ ಆಗಿರುತ್ತದೆಯೇ ಹೊರತು ತಾತ್ವಿಕವಾಗಿರುವದಿಲ್ಲ. ಅಂಥ ಕೋಪದ ವೇಳೆಯಲ್ಲಿಯೂ ಅವರ ವಿಚಾರದಂತೆ ಲಾಭವಾಯಿತೆಂದರೆ ಅವರ ಸಿಟ್ಟು ಮುಂದುವರೆಯದೆ ಶಾಂತವಾಗಿ ಬಿಡುತ್ತದೆ. ಇಂಥವರಿಗೆ ಮಾನ, ಮರ್ಯಾದೆ, ಗೌರವಗಳು ಮುಖ್ಯವಾಗಿರುವದಿಲ್ಲ ಬದಲಾಗಿ ಮೋಸದ ಲಾಭವೇ ಮುಖ್ಯವಾಗಿರುತ್ತದೆ.
2.
ಹೆಮ್ಮೆಪಡುವಂತಿರಬೇಕದು
ಬದುಕಿದಾ ಬದುಕಿನರಿವು,
ಮೃದಾಳಿ ಹೋಗಬೇಕದು
ಬಾಳಿನಲಿ ಜೀವನದ ತಿಳಿವು!
- ಎಮ್ಮೆಚ್ಚೆ
ವಿಸ್ತೃತ
ಹುಟ್ಟಿದ ಪ್ರತಿಯೊಂದಕ್ಕೂ ಸಾವು ಶತಸಿದ್ಧ. ಅದು ಜೀವಿಗಳೇ ಆಗಿರಬಹುದು, ವಸ್ತುಗಳೇ ಆಗಿರಬಹುದು ತಮ್ಮ ಪ್ರಮಾಣಗಳ ಕಾಲಕ್ಕೆ ನಶಿಸಿ ಹೋಗಲೇಬೇಕು ಇದು ಜಗದ ನಿಯಮ. ಆದರೆ ಹುಟ್ಟು ಸಾವುಗಳ ಮಧ್ಯ ಬದುಕುವ ಬದುಕು ಬಹಳ ವಿಚಿತ್ರ ಹಾಗೂ ಜಂಜಡಯುಕ್ತವಾದುದು. ಅದು ಯಾವಾಗಲೂ ಸುಂದರವಾಗಿರಬೇಕು. ಸುಂದರವಾದ ಬದುಕು ನಾವು ಜೀವಿಸುವ ಮುಂಚೆ ನಮಗಾಗಿ ಕಾದಿರುವದಿಲ್ಲ. ನಾವು ಜನ್ಮಿಸಿದ ನಂತರವೇ ನಮ್ಮ ಬದುಕನ್ನು ಸುಂದರವಾಗಿಸಿಕೊಳ್ಳಬೇಕು. ಜಗತ್ತಿನಲ್ಲಿ ಬೇಕು, ಬೇಡಾದ ಎಲ್ಲಾ ಸಂಗತಿಗಳೂ ಅಡಗಿರುತ್ತವೆ. ನಾವು ಹಂಸಪಕ್ಷಿ, ನೀರು ಬೇರ್ಪಡಿಸಿ ಹಾಲು ಆಯ್ಕೆ ಮಾಡಿಕೊಂಡಂತೆ ಮನುಜರಾದ ನಾವುಗಳು ಒಳ್ಳೆಯತನಗಳನ್ನು ಅಳವಡಿಸಿಕೊಂಡು ಬದುಕಬೇಕು. ಯಾವುದು ಒಳ್ಳೆಯದ್ದು, ಯಾವುದು ಕೆಟ್ಟದ್ದೆಂದು, ಪ್ರಚಲಿತ ಕಾಲಘಟ್ಟದ ಪರಿಕಲ್ಪನೆಗೆ ಹೊಂದಿಕೊಂಡು ಹಂತ ಹಂತದ ಸ್ವಅನುಭವಗಳನ್ನು ಪಡೆಯುತ್ತ, ತಪ್ಪುಗಳನ್ನು ತಿದ್ದಿಕೊಂಡು ಅವು ಮರಕಳಿಸದಂತೆ ಬದುಕಬೇಕು. ನಾವು ಜೀವಂತವಾಗಿದ್ದಾಗ ನಮ್ಮ ಗುಣಾವಗುಣಗಳ ಬಗ್ಗೆ ಜನರು ಮಾತನಾಡಲು, ಯಾಕೆ ಬೇಕು ಇಲ್ಲದ ಪಜೀತಿ ಎಂದು ಹಿಂಜರಿಕೆ ಪಡುತ್ತಾರೆ. ಸತ್ತನಂತರ ನೈಜತನಗಳ ಬಗ್ಗೆ ಮಾತನಾಡುತ್ತಾರೆ. ಸತ್ತ ವ್ಯಕ್ತಿ ತನ್ನೊಂದಿಗೆ ಏನನ್ನೂ ಒಯ್ಯಲಾರ. ಆದರೆ ಒಳ್ಳೆಯ, ಕೆಟ್ಟ ಎಂಬ ಮಾತುಗಳಷ್ಟೇ ಅವರ ಹಿಂದೆ ಬರುತ್ತವೆ. ಆದ್ದರಿಂದ ನಾವು ಸತ್ತನಂತರ ಒಳ್ಳೆಯ ಎಂಬ ಹೇಳಿಕೆಯೇ ಸಾಕು ಬದುಕಿನ ಸಾರ್ಥಕತೆಗೆ. ಕೆಲ ಜನರು, ಸತ್ತನಂತರ ಒಳ್ಳೆಯ,ಕೆಟ್ಟದ್ದು ತೆಗೆದುಕೊಂಡು ನಾವೇನು ಮಾಡೊಣ. ನಾವೇ ಇರುವದಿಲ್ಲ, ಎಲ್ಲಾ ಅನುಭವಿಸಿದರಾಯಿತೆಂಬ ಭ್ರಮೆಯಲ್ಲಿರುತ್ತಾರೆ. ಆದರೆ ನಿಜವಾಗಿಯೂ ಹಾಗೆ ಬದುಕಿದವರ ಬದುಕಿನ ಪ್ರಭಾವ ತಮ್ಮ ಪೀಳಿಗೆಯ ನೈತಿಕ, ಅಭಿವ್ರೃದ್ಧಿದಾಯಕ ಬದುಕಿಗೆ ಮರಕವಾಗುವದೆಂದು ತಿಳಿದಿರುವದಿಲ್ಲ. ಆದ್ದರಿಂದ ಜೀವನದಲ್ಲಿ ನೈತಿಕತೆಯಿಂದ ಸಾತ್ವಿಕ ಬದುಕು ಸಾಗಿಸಲು ಪ್ರಯತ್ನಿಸಬೇಕು. ಜಗತ್ತಿನಲ್ಲಿರುವ ಒಳ್ಳೆಯದನ್ನು ಹಿಡಿದುಕೊಳ್ಳಲು ಪ್ರಯತ್ನಿಸಬೇಕು. ನಾವು ಸತ್ತರೂ ನಮ್ಮ ತನಗಳನ್ನು ನೆನೆದು ಮುಂದಿನ ಪೀಳಿಗೆ ಹೆಮ್ಮೆಪಡುವಂತಾಗಬೇಕು. ಇದು ಯಶಸ್ವಿ ಜೀವನವಾಗಬೇಕು.
ಜೀವನದಲ್ಲಿ ಏನೆಲ್ಲ ತಿಳಿದುಕೊಳ್ಳುತ್ತ ಆ ತಿಳುವಳಿಕೆಯ ಅರಿವಿನಲ್ಲಿ ಬದುಕಬೇಕು. ಆ ತಿಳುವಳಿಕೆ ಕೇವಲ ತಿಳಿದುಕೊಂಡರೆ ಸಾಲದು. ಆ ತಿಳುವಳಿಕೆಯನ್ನು ಮೃಗೂಡಿಸಿಕೊಂಡು ಅರಿವಿನೊಂದಿಗೆ ಜೀವನ ಸಾಗಿಸಬೇಕು. ಮೌಲ್ಯಗಳಿಲ್ಲದ ಜೀವನಕ್ಕೆ ಬೆಲೆಯೇ ಇಲ್ಲ. ಮೌಲ್ಯ ಕಳೆದುಕೊಂಡ ಅತೃಪ್ತ ಆತ್ಮಗಳಿಗೆ ಎಲ್ಲಿಯೂ ನೆಲೆ ಇಲ್ಲ ಎನ್ನುವದನ್ನು ಅರಿತು ಬಾಳಬೇಕು.
3.
ಶಬ್ದ ಜಾಲಗಳ ಗಂಧರ್ವನು
ಹಬ್ಬಿಸುವ ಗಬ್ಬುನಾಥವನು,
ಬಾಯಿಬಿದ್ದ ಸಿದ್ದರೇ ಬುಧ್ಧ
ನಿದ್ದೆ ಕದ್ದವಳೋ ಭಾರೀ ಪ್ರಸಿದ್ಧ!
- ಎಮ್ಮೆಚ್ಚೆ
ವಿಸ್ತೃತ
ವಿದ್ಯೆಯುಳ್ಳ ಜ್ಞಾನವಂತರಿಗೆ ವಿಷಯಾದರಿತ ಶಬ್ದಗಳು ಒಲಿದಿರುತ್ತವೆ. ಊಟ ಬಲ್ಲವರಿಗೆ ರೋಗವಿಲ್ಲ, ಮಾತು ಬಲ್ಲವರಿಗೆ ಜಗಳವಿಲ್ಲ ಎನ್ನುವಂತೆ ಎಂಥಹ ಜಗಳದ ಪರೀಸ್ಥಿತಿಯನ್ನೂ ಜ್ಞಾನವುಳ್ಳವರು ನಿಬಾಯಿಸುತ್ತಾರೆ. ಸಾಮಾನ್ಯರು ಸಾಮನ್ಯ ಭಾಷೆಗಳಿಂದ ಜಗಳಾಡುವಾಗ, ಬಲ್ಲವರು ಅವರನ್ನು ತಮ್ಮ ತಪ್ಪುಗಳಲ್ಲಿ ಸಿಕ್ಕಿಸಿಕೊಳ್ಳುವಂತೆ ಮಾಡಿ ಬಿಡುತ್ತಾರೆ. ಆದರೆ ಅವರು ಸಾಂದರ್ಭಿಕ ಕೂಸುಗಳಾಗಿರುತ್ತಾರೆಯೇ ಹೊರತು ಮಡಿವಂತಿಕೆಗೆ ಗಮನ ಕೊಟ್ಟಿರುವದಿಲ್ಲ. ಅವರ ಮಾತಿನಿಂದ ಪರ ಕೇಳುಗರಿಗೆ ಅಸಹ್ಯಕರವೆನಿಸಲೂಬಹುದು. ಆದರೆ ಆ ಮಾತುಗಳ ಹಿಂದೆ ಮೌಲ್ಯ ಅಡಗಿರುತ್ತದೆ.
ಮೌನ ಬೇರೆ, ಧ್ಯಾನ ಬೇರೆ. ಮೌನಿಗಳೆಲ್ಲ ಬುದ್ಧನ ಪ್ರತಿರೂಪಗಳಲ್ಲ. ಧ್ಯಾನಾಸಕ್ತ ಬುದ್ಧನ ಅನುಯಾಯಿಗಳು ಬುದ್ಧರಾಗಬಹುದು. ಹಾಗೆಯೇ ಕೆಲವರು ಹೆದರಿಕೆ ಹಾಗೂ ನಾನಾ ವಿಷಯಗಳಿಗೆ ತಮ್ಮ ಮನೋಭಾವನೆಗಳನ್ನು ಅದುಮಿಕೊಂಡು ಮೌನವಹಿಸಬಹುದು ಸುಬುದ್ದಿಯ ಮೌನಿಗಳಾಗಿರಲು ಸಾಧ್ಯವಿಲ್ಲ. ಸುಬುದ್ಧಿಯಿಂದ ಮೌನಿಗಳಾಗಿದ್ದರೆ ಒಳ್ಳೆಯವರಾಗಿರುತ್ತಾರೆ. ಗರತಿಯ ವೇಷದರಿಸಿದಳು ಗರತಿಯಾಗಲಾರಳು, ಗರತಿಯ ಗುಣತತ್ವ ಅಳವಡಿಸಿಕೊಂಡು ಗರತಿ ಅನ್ನಿಸಿಕೊಳ್ಳಬೇಕು. ಪರರ ಆಸೆಗಳನ್ನು ಕೆದುಕುವ ಮಾಯಾಂಗಣೆ ಅವರ ಮನಶಾಂತಿ ಹಾಳುಮಾಡುವುದರ ಜೊತೆಗೆ ಎಲ್ಲ ವಿಟಪುರುಷರ ಬಾಯಿ ಮಾತಿನ ಹಾಸ್ಯ ವಸ್ತುವಿನಂತಿ ವ್ಯತಿರಿಕ್ತ ಪ್ರಸಿದ್ಧಿ ಪಡೆಯುತ್ತಾರೆ.
ಆದ್ದರಿಂದ ಜೀವನದಲ್ಲಿ ಎಲ್ಲ ತಿಳಿಯುತ್ತ ಅರಿವಿನೊಂದಿಗೆ ಬದುಕುವುದು ಬಹಳ ಮಹತ್ವವಾದುದು. ಇದು ನಮ್ಮ ತನದ ಜೊತೆ ಸಮಾಜದ ಸ್ವಸ್ಥ್ಯವನ್ನೂ ಕಾಪಾಡುತ್ತದೆ.
Comments
Post a Comment
Liked the post? Don't forget to tell us, do comment.