1.

ಊರಿಗೇ ಉಡದಾರ ಕಟ್ಟಿದವನು  ಯಾರಿಲ್ಲ
ನಾನೆಂದವನಿಲ್ಲಿ ಧೀರ್ಘಾವದಿ ಉಳಿದಿಲ್ಲ
ಅನುಭವದ ಶಾಲೆಗೆ ಹೊರಗುಳಿದವರಾರಿಲ್ಲ
ತಾನೇಎಂದು ಬೀಗಿ ಜಗವನಾರೂ ಗೆದ್ದಿಲ್ಲ!
                                                          - ಎಮ್ಮೆಚ್ಚೆ

ವಿಸ್ತ್ರೃತ
    ನನ್ನೂರು, ತನ್ನೂರೂ ಎಂದು ಬೀಗುವವರು ಬಹಳ ಜನ ಇರುತ್ತಾರೆ. ಅದರಲ್ಲಿ ಕೆಲವರಂತೂ, ಇಡೀ ಊರ ಜನ  ತನ್ನ ಅನತಿಯಂತೆಯೇ ನಡೆದುಕೊಳ್ಳುತ್ತಾರೆ. ಊರಿಗೆ ನಾನೇ ಹೆಚ್ಚು, ನನ್ನಿಂದಲೇ ಎಲ್ಲ ಎಂದು ತಪ್ಪಾಗಿ ತಿಳಿದುಕೊಂಡು ಬೀಗುತ್ತಿರುತ್ತಾರೆ. ಅಂಥವರಿಗೆ ಕೆಲಜನ ಸುತ್ತಲೂ ಹೊಗಳುಬಟ್ಟರಿರುತ್ತಾರೆ. ಕೆಲವರು ಹೆದರಿಕೆಯಿಂದ ಅಂಥವರ ಉಪಟಳ ಸಹಿಸಿಕೊಂಡಿರತ್ತಾರೆ. ಅಂಥವರಿಂದ ಬ್ರಮೆಗೊಂಡು, ಇಡಿ ಊರೇ ತನಗೆ ಅಂಜುತ್ತಾರೆ ಹಾಗೂ ತಾನು ಹೇಳಿದಂತೆ ಕೇಳುತ್ತಾರೆಂದು ತಿಳಿದಿರುತ್ತಾರೆ. ಆದರೆ ಊರಲ್ಲಿಯ ಬಹಳ ಜನರು ತಮ್ಮ ತಮ್ಮ ಬಾಳುವೆಯ ವಿಚಾರದಲ್ಲಿಯೇ ಮಗ್ನನಾಗಿರುತ್ತಾರೆ ಹಾಗೂ ಇಲ್ಲದ ಉಸಾಬರಿ ತಮಗೇಕೆಂದು ತಮ್ಮ ಪಾಡಿಗೆ ತಾವಿರುತ್ತಾರೆ. ಆದರೆ ಭ್ರಮಾಧೀನ ವ್ಯಕ್ತಿ ಎಲ್ಲ ತನಗೇ ಹೆದರಿದ್ದಾರೆಂದು ಒಣಜಂಭ ಕೊಚ್ಚಿಕೊಳ್ಳುತ್ತಿರುತ್ತಾನೆ. ಈತನ ಉಪಟಳ ಹೆಚ್ಚಾದಾಗ ಎಲ್ಲಸೇರಿ ಕೊಚ್ಚಿಹಾಕುತ್ತಾರೆ. ಊರಿಗೆ ಯಜಮಾನ, ಹಿರಿಯ ಅನ್ನಿಸಿಕೊಳ್ಳಬೇಕಾದರೆ ತನ್ನ ಗುಣ ನಡತೆಗಳನ್ನು ಚನ್ನಾಗಿಟ್ಟುಕೊಂಡು ಪ್ರೀತಿ ವಿಶ್ವಾಸದಿಂದ ಸತ್ಯ ಮರ್ಗದಲ್ಲಿ ನಡೆಯಬೇಕೆಂಬುದನ್ನು ಮರೆತಿರುತ್ತಾರೆ. ಅಂಥವರ ಯಜಮಾನಿಕೆ ಅಲ್ಪಕಾಲದ್ದಾಗಿರುತ್ತದೆ.
  ಇಂಥಹ  ಹಿರಿಕ ಸ್ಥಾನದ ಯಜಮಾನಿಕೆ  ಸರಿಯಾದ ರೀತಿಯಲ್ಲಿ ಇರಬೇಕೆಂದರೆ, ಒಂದೇ ದಿನದಲ್ಲಾಗಲಿ, ಭಲಾಢ್ಯತನದಿಂದಲಾಗಲಿ ಒಲಿಯುವದಿಲ್ಲ. ಜನರೊಂದಿಗೆ ಬೆರೆತು ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತ, ಪರರ ಸಮಸ್ಯೆಗಳನ್ನು ಸರಿಯಾದ ಮಾರ್ಗದಲ್ಲಿ ನಿಗ್ರಹಿಸುವಂತ ಅನುಭವಗಳನ್ನು ಪಡೆದುಕೊಳ್ಳಬೇಕು. ಅನುಭವಗಳು ಎಲ್ಲರಿಗೂ ಆಗುತ್ತವೆ. ಆದ ತಪ್ಪುಗಳನ್ನು ಅನುಭವದ ಜ್ಞಾನದಿಂದ ತಿಳಿದುಕೊಂಡು  ಮತ್ತೆ ತಪ್ಪುಗಳು ಜರುಗದಂತೆ ಜೀವನ ಸಾಗಿಸಬೇಕು. ಈ ಮಾನವ ಸಮಾಜ ಅನುಭವದ ಪಾಠಶಾಲೆ ಇದ್ದಹಾಗೆ. ಇಲ್ಲಿಂದಲೇ ಅನುಭವ ಪಡೆದುಕೊಳ್ಳುತ್ತ ಉನ್ನತ ಸ್ಥಾನಕ್ಕೇರಬೇಕು.
    ನಾವು ಇತಿಹಾಸ ಗಮನಿಸಿದಾಗ, ಈ ಜಗತ್ತನ್ನ ವಶಪಡಿಸಿಕೊಳ್ಳಲು ನಾನಾ ಜನರು ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ. ಆದರೆ ಯಾರಿಂದಲೂ ಜಗತ್ತನ್ನು ಗೆದ್ದು ತಮ್ಮ ಕೈವಶ ಮಾಡಿಕೊಳ್ಳುವದು ಸಾಧ್ಯವಾಗಿಯೇ ಇಲ್ಲ. ಆದರೆ ತಮ್ಮ ಪ್ರೀತಿ ,ವಿಶ್ವಾಸ ಹಾಗೂ ತಮ್ಮ ಪ್ರಾಮಾಣಿಕ ಸಮಾಜ ಸೇವೆಯಿಂದ ಎಷ್ಟೋ ದಾರ್ಷನೀಕರು ಜಗತ್ತಿನ ತುಂಬ ಹೆಸರುವಾಸಿಯಾಗಿದ್ದಾರೆ. ಅಂಥವರ ದೈವೀಶಕ್ತಿಯ ಗುಣಗಳಿಂದ ಹಾಗೂ ತಾತ್ವಿಕ ಗುಣ ಅಳವಡಿಸಿಕೊಳ್ಳುವ ಮುಖಾಂತರ ಜನರು ನೆಮ್ಮದಿಯುತ ಜೀವನ ಸಾಗಿಸಲು ಸಾಧ್ಯವಾದುದಾಗಿರುತ್ತದೆ.
    ಅನಾವಶ್ಯಕ ಭ್ರಮಾವಾದಿ ರಾಜ ಮಹಾರಾಜ ಸರ್ವಾಧಿಕಾರಿ ಹಿಟ್ಲರನಂಥವರೂ ಹೇಳ ಹೆಸರಿಲ್ಲದಂತೆ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ. ಆದ್ದರಿಂದ ಜನರನ್ನು ಪ್ರೀತಿ ವಿಶ್ವಾಸಗಳಿಂದ ಗೆದ್ದವರು ಅವರ ಹ್ರೃದಯದಲ್ಲಿ ಸ್ಥಾನ ಪಡೆದುಕೊಳ್ಳುತ್ತಾರೆ. ಅವರ ಹೆಸರನ್ನು ಅಜರಾಮರ ಗೊಳಿಸುತ್ತಾರೆ. ಹೆದರಿಸಿ, ಬೆದರಿಸಿ  ಗೆದೆಯುತ್ತೇನೆಂದವರು ಜನರ ಕೆಂಗಣ್ಣಿಗೆ ಬಲಿಯಾಗಿ ನಾಶ ಹೊಂದುತ್ತಾರೆ.

2.

ಪಾಪದ ಪರಿಕಲ್ಪನೆಯದು
ಪರಿಹಾರದ  ಲಾಭ ಅಪಾರ,
ಪುಣ್ಯಫಲಗಳ ಬೇಡಿಕೆಯದು
ಆಶ್ವಾಸನೆಗಳದೇ ವಿಹಾರ!
                      ಎಮ್ಮೆಚ್ಚೆ

ವಿಸ್ತ್ರೃತ
    ಜನರಲ್ಲಿ ಒಳ್ಳೆಯ, ಕೆಟ್ಟ ಗುಣಗಳೆರಡೂ ಸೇರಿರುತ್ತವೆ. ಧರ್ಮದ ಉದ್ದೇಶ ಒಳ್ಳೆಯದನ್ನು ಮಾಡಬೇಕೆನ್ನುವುದೇ ಆಗಿರತ್ತದೆ ಎಲ್ಲ ಮಾನವ ಜೀವಿಗಳೂ ಯಾವುದೇ ತಪ್ಪಾಗದಂತೆ ಸಹಜೀವನ ನಡೆಸಬೇಕು. ಧಾರ್ಮಿಕತೆಯಿಂದ ಬದುಕಿ ದೈವತ್ವದೆಡೆಗೆ ಸಾಗಬೇಕೆಂದು ಹೇಳುತ್ತದೆ. ಅಧರ್ಮಿಗಳನ್ನು ಅವರಷ್ಟಕ್ಕೇ ಬಿಡುವದಿಲ್ಲ. ಕೆಟ್ಟ ಕೆಲಸ ಮಾಡಿದ ಪಾಪಿಗಳನ್ನೂ ಸಹ ಪರಿಹಾರದ ಮುಖಾಂತರ ಪುಣ್ಯತ್ವ ಪಡೆದುಕೊಳ್ಳಲು ಹೇಳುತ್ತದೆ.
 ಇತ್ತಿತ್ತಲಾಗಿ ಪಾಪ ಪರಿಹಾರಕ ಪುರೋಹಿತಶಾಯಿ ವರ್ಗದವರು ಸ್ವಾರ್ಥಗಳಿಗೆ ಬಲಿಯಾಗಿ, ತಪ್ಪು ಮಾಡಿದವನನ್ನು ಸ್ವರ್ಗ ನರಕ  ಮೋಕ್ಷಗಳ ಪರಿಕಲ್ಪನೆಗಳಿಂದ ಹೆದರಿಸಿ ಪಾಪ ಪರಿಹಾರಕ್ಕಾಗಿ ತಮಗೆ ಹೆಚ್ಚು,ಹೆಚ್ಚು ಲಾಭಬರುವಂತಹ ಪರಿಹಾರೋಪಾಯಕ್ಕೆ ತುರುಕುತ್ತಾರೆ. ಒಣ ಹೆದರಿಕೆಗೇ ಹೆದರಿದ ತಪ್ಪು ಮಾಡಿದವ ತನ್ನ ಶಕ್ತಿಗೆ ಮೀರಿದ ಖರ್ಚಾಗಿದ್ದರೂ ಸಾಲ ಮಾಡಿಯಾದರೂ ಪರಿಹಾರೋಪಾಯಕ್ಕೆ ಸಿಲುಕಿಕೊಳ್ಳುತ್ತಾನೆ.  ಕುರಿ ಬೆಳೆದರೆ ಕಟುಕನಿಗೇ ಲಾಭ ಎನ್ನುವಂತೆ, ಹೆಚ್ಚು ಜನರು ಪಾಪ ಮಾಡಿದಷ್ಟೂ ಪರಿಹಾರಕರಿಗೇ ಲಾಭವೆನ್ನುವಂತಾಗಿಬಿಟ್ಟಿದೆ.
 ಜನರು ದೇವರಲ್ಲಿ ಏನಾದರೂ ಬೇಡಿಕೊಳ್ಳಬೇಕೆಂದರೆ, ಏನೇನೂ ಖರ್ಚು ಮಾಡಬೇಕಾಗಿರುವದಿಲ್ಲ. ತನ್ನ ಮನದ.ಬೇಡಿಕೆ ಈಡೇರಿದರೆ ಹಾಗೆ ಮಾಡುವೆ, ಹೀಗೆ ಮಾಡುವೆ ಎಂದು ಬರೀ ಆಶ್ವಾಸನೆಗಳಲ್ಲಿಯೇ ಮುಗಿಸಿಬಿಡುತ್ತಾರೆ. ಇದರಿಂದ ಪುರೋಹಿತಶಾಯಿ ವರ್ಗಕ್ಕೆ ದೊಡ್ಡ ಪ್ರಮಾಣದ ಲಾಭವಾಗುವದಿಲ್ಲ. ಇಲ್ಲಿ ಜನರಿಗೆ ಭಯವಿರುವದಿಲ್ಲ. ಎಲ್ಲಿ ಭಯವಿರುತ್ತದೊ ಅಲ್ಲಿ ಭಕ್ತಿ ಇರಲು ಸಾಧ್ಯವೇ ಇಲ್ಲ. ಭಯದ ಭಕ್ತಿ ನಿರ್ಮಲವಾದುದಲ್ಲ. ಭಕ್ತಿ ಎನ್ನುವದು ಅಗೊಚರ ಶಕ್ತಿಯೊಡನೆ ಅನು ಸಂದಾನ ಮಾಡಿಕೊಳ್ಳುವದು. ತನ್ನ ತನು ಮನಗಳನ್ನು ಆ ಶಕ್ತಿಗಳಲ್ಲಿ ಲೀನಗೊಳಿಸುವದಾಗಿರುತ್ತದೆ ಹೊರತು ಯಾವುದೇ ಆರ್ಥಿಕ ವ್ಯವಹಾರವಾಗಿರುವದಿಲ್ಲ. ನಮ್ಮ ಮನಸೇ ದೇವಾಲಯ. ಒಳ್ಳೆಯ ವಿಚಾರಗಳೇ ದೇವರು, ಅವುಗಳ ನಿರಂತರ ಪ್ರಯತ್ನವೇ ಭಕ್ತಿ.

Comments

Popular Posts