1.
ದಂಡಿಗೆ ಹೆದರಿಲ್ಲ, ದಾಳಿಗೆ ಬೆದರಿಲ್ಲ,
ಹೆಗ್ಗಣಕೆ ಹೆದರುವದು ಯಾ ಮಾತು.
ತಂಡಿಗೆ ಕುಗ್ಗಿಲ್ಲ, ಬಿಸಿಲಿಗೆ ಬಗ್ಗಿಲ್ಲ
ಬಂಡರಿಗೆ ಬಗ್ಗುವದು ಯಾ ಕತೆಯು!
- ಎಮ್ಮೆಚ್ಚೆ
ವಿಸ್ತೃತ
ನಮ್ಮ ನೆಲದ ಉಳಿವಿಗಾಗಿ ಹೋರಾಡುವ ಯುದ್ಧ ರಣಭೀಕರವಾದುದು. ಯೊಧರು ತಾಯ್ನಾಡಿಗಾಗಿ ಬಲಿದಾನ ಮಾಡುವ ಮನಸ್ಥಿತಿ ಇರುತ್ತದೆ. ಯಾವುದೇ ಯುದ್ಧ ಇದೇ ತರಹ ಇರಬೇಕೆನ್ನುವಂತಹದ್ದು ಏನಿಲ್ಲ. ಯುದ್ಧ ಕೌಶಲ್ಯಗಳು ಅನೇಕ. ಯಾವ ಪರಿಸ್ಥಿತಿಯಲ್ಲಿ ಏನಾಗುವುದೇ ಎನ್ನುವ ಪರಿವೇ ಇಲ್ಲದೆ ಶತೃ ಸಂಹಾರ ಮಾಡಿಯೇ ತೀರುತ್ತೇನೆನ್ನುವಂಥ ಛಲದ ಯೋಧನ ಶೌರ್ಯ ಹೊಂದಿದ ಮನೆಯ ಯಜಮಾನ ವ್ಯಕ್ತಿ, ಜೀವನ ಸಾಗಿಸಲು ಬೇಕಾದ ಮನೆಯ ಅಡಿಪಾಯವನ್ನೇ ಹಾಳುಗೆಡುವ ಕೊಬ್ಬಿದ ಇಲಿಯಂತಹ ದುಷ್ಟ ಮಕ್ಕಳಿಗೆ ಹೆದರಲಾರ.
ದೈಹಿಕತೆಗೆ ಮತ್ತು ಮನಸಿಕತೆಗೆ ತೊಂದರೆ ಉಂಟುಮಾಡುವ ಋತು ಚಕ್ರಗಳಿಗೂ ಅಂಜದೆ ಕಾಲಮಾನಕ್ಕೆ ತಕ್ಕುದಾಗಿ ಬದುಕಿರುವಂತಹ ವ್ಯಕ್ತಿಗಳಿಗೆ ಯಾರಾದರೂ ಸಾಮಾನ್ಯರು ವಿನಾಕಾರಣ ತಮ್ಮ ಭಂಡತನದಿಂದ ಹೆದರಿಸಿ ಅವಮಾನಿಸಬೇಕೆಂದರೆ ಸಾಧ್ಯವಾಗುವದಿಲ್ಲ. ಏಕೆಂದರೆ ಇಂತಹ ಬಹಳ ಪ್ರಸಂಗಗಳ ಅನುಭವ ಅವನಿಗಾಗಿರುತ್ತದೆ.. ನಿಭಾಯಿಸುವ ಕಲೆ ಗೊತ್ತಿರುತ್ತದೆ.
2.
ಮೀರಿ ಪಡೆದ ಚೈತನ್ಯವೇ ನಿನ್ನ ಧರ್ಮ
ಮೇರು ತನದ ಅಧಿಮತೆಯೇ ನಿನ್ನ ಕರ್ಮ,
ಗೌರವದಿ ಅಸ್ಥಿತ್ವದಲ್ಲಿರುವುದು ಸುಧರ್ಮ
ಮಾನವಂತಿಕೆಯದುವೇ ಮಹಾ ಧರ್ಮ!
- ಎಮ್ಮೆಚ್ಚೆ
ವಿಸ್ತೃತ
ಮನುಷ್ಯರು ಜಡ ದೇಹಿಗಳಾಗಬಾರದು. ದೇಹದಲ್ಲಿ ಅಂತಶ್ಚಕ್ತಿ ಉದ್ಭವವಾಗುತ್ತಿರಬೇಕು. ನಾವುಗಳು ಅಗೋಚರ ಅದಮ್ಯ ಚೈತನ್ಯವನ್ನು ಅರಸುವದಕ್ಕೊಸ್ಕರ ದೇಹ ಮತ್ತು ಮನಸುಗಳನ್ನು ನಿಯುತ್ರಿಸಿ, ಹದಗೊಳಿಸಿಕೊಳ್ಳುವುದು ಮುಖ್ಯ. ತಮ್ಮ ಹಾಗೂ ತಮ್ಮ ದೇಹಕ್ಕೆ ನೀಗದ ಹೆಚ್ಚಿನ ವಿಶೇಷ ಚೈತನ್ಯವನ್ನು ಗಳಿಸಿಕೊಳ್ಳುವುದೇ ಒಂದು ಮಹಾ ಸಾಧನೆ. ಕೆಲಜನರಿಗೆ, ಅಂತರಾಳದಲ್ಲಿ ಅಡಗಿದ ಚೈತನ್ಯ ಶಕ್ತಿಗಳನ್ನು ಪಡೆದುಕೊಳ್ಳಬೇಕೆಂದು ಪ್ರಯತ್ನಿಸಿದರೂ ಸಾಧ್ಯವಾಗುವದಿಲ್ಲ. ಚೈತನ್ಯ ಪಡೆದುಕೊಳ್ಳುವ ತನಗಳಿಗೆ ಅವರವರ ಕರ್ಮ ಫಲಗಳೇ ಕಾರಣವಾಗಿರಬಹುದೇನೊ.
ಮನುಷ್ಯರಾದವರು ಎಲ್ಲರೊಂದಿಗೆ ಸಾಮರಸ್ಯದಿಂದ ಜೀವನ ಸಾಗಿಸಬೇಕು.ತನ್ನದೇ ಆದಂತಹ ಘಣತೆ ಗೌರವಗಳನ್ನು ಇಟ್ಟುಕೊಂಡು ಎಲ್ಲರೂ ಮೆಚ್ಚುವಂತೆ ಬದುಕಬೇಕು. ಎಲ್ಲದ್ದಕ್ಕಿಂತ ಹೆಚ್ಚಾಗಿ ,ಪ್ರತಿಯೊಬ್ಬರೂ ಮಾನವರೇ .ನಾವೆಲ್ಲರೂ ಒಂದೇ ತಾಯಿಯ ಮಕ್ಕಳು ಎನ್ನುವ ಭಾವನೆಗಳನ್ನಿಟ್ಟುಕೊಂಡು ಬದುಕಬೇಕು. ಮನವೀಯ ಮೌಲ್ಯಯುತ ಗುಣಗಳನ್ನು ಬೆಳಿಸಿಕೊಳ್ಳುವದು ಎಲ್ಲಾ ಧರ್ಮಗಳಿಗಿಂತ ಶ್ರೇಷ್ಠವಾದುದು.ಮನವಂತಿಕೆ ಇಲ್ಲದ ಬದುಕು ವ್ಯರ್ಥವಾದುದು.
ಆದ್ದರಿಂದ ಮನುಷ್ಯರಾದ ನಾವುಗಳು ನಮ್ಮ ಸಾಮರ್ಥ್ಯಕ್ಕೂ ಮಿಕ್ಕಿದ ಅಗೊಚರ,ಅದಮ್ಯ ಚೈತನ್ಯವನ್ನು ಪಡೆದುಕೊಳ್ಳುತ್ತ ಸುಗುಣರಾಗಿ ಗೌರವದಿಂದ ಮಾನವೀಯ ಮೌಲ್ಯಗಳೊಂದಿಗೆ ಬದಕುವುದು ಶ್ರೇಷ್ಠವಾದುದಾಗಿರುತ್ತದೆ.
Comments
Post a Comment
Liked the post? Don't forget to tell us, do comment.