1.

ಬಡವನೆಂದು ಬಾಳು
ಬದುಕೀತು ನಾಲ್ಕುದಿನ
ಬಲ್ಲಿದನೆಂದರೆ ಹೇಳು
ಬರಿದಾಗಿಸಲು ನೂರಾರು ಜನ!
                                            - ಎಮ್ಮೆಚ್ಚೆ

ವಿಸ್ತೃತ
   ಸರಕಾರಗಳು ಹಾಗೂ ಬ್ರಷ್ಟಾಚಾರಿಗಳು ತಮ್ಮ ಹುನ್ನಾರಗಳಿಂದಾಗಿ ಜನರಿಗೆ ಬೇಕು ಬೇಡಾದವುಗಳನ್ನು ಪುಕ್ಕಟೆಯಾಗಿ ಕೊಡುತ್ತ ಅವರನ್ನು ನಿರುದ್ಯೋಗಿಗಳನ್ನಾಗಿ ಮಾಡುವುದರ ಜೊತೆಗೆ ಸ್ವಾಭಿಮಾನ ಶೂನ್ಯರನ್ನಾಗಿ ಮಾಡಿಬಿಟ್ಟಿವೆ. ಎಲ್ಲಿ ಪುಕ್ಕಟೆಯಾಗಿ ಸಿಗುತ್ತದೆಯೋ ಅಲ್ಲಿ ನಾಚಿಕೆ ಬಿಟ್ಟು ಕೈ ಒಡ್ಡುವದನ್ನು ಜನರಿಗೆ ರೂಡಿಸಿ ಬಿಟ್ಟಿವೆ. ಯಾರಾದರೂ ಏನನ್ನಾದರೂ ಪುಕ್ಕಟೆಯಾಗಿ ಕೊಡುತ್ತಾರೆಂದರೆ ಮೈಲುದ್ದ ಸರದಿ ಸಾಲುಗಳಲ್ಲಿ ದಿನಪೂರ್ತಿ ಕಳೆವವರು ಸ್ರೃಷ್ಠಿಯಾಗಿದ್ದಾರೆ. ಜೊತೆಗೆ ಸ್ವಾಭಿಮಾನದಿಂದ ದುಡಿದು ತಿನ್ನದೆ ಯಾವ ಮಾರ್ಗದಲ್ಲಾದರೂ ಪುಕ್ಕಟೇ ಸಿಗಬೇಕೆಂದು ವಂಚನೆ, ಮೋಸ, ಕಳ್ಳತನಗಳತ್ತಲೂ ಮನಸು ಹರಿಬಿಡುತ್ತಿದ್ದಾರೆ.
   ಯಾರಾದರೂ ಧನವಂತನಿದ್ದಾನೆಂದು ತಿಳಿದರೆ ಸಾಕು ಅವನಿಂದ ಯಾವ ರೀತಿ ಹಣ ಸುಲಿಯಬೇಕು ಅನ್ನುವ ಹುನ್ನಾರದತ್ತಲೇ ಅವರು ತಮ್ಮ ಮನಸನ್ನು ಕೇಂದ್ರೀಕರಿಸುವಂತವರಾಗಿದ್ದಾರೆ. ಆದ್ದರಿಂದ ಪ್ರಾಮಾನಿಕತೆಯಿಂದ ದುಡಿದು ಗಳಿಸಿದ ಜನರು ಒಣ ದೊಡ್ಡಸ್ತಿಕೆ ತೋರಿಸಿಕೊಳ್ಳದೆ ತಮ್ಮಷ್ಟಕ್ಕೆ ತಾವು ಬದುಕಿದಲ್ಲಿ ಅಂಥ ತೊಂದರೆಗಳಾವೂ ಜರುಗದೆ ದೀರ್ಘವಾಗಿ ನೆಮ್ಮದಿಯಿಂದ ಇರಬಹುದು. ಒಂದೊಮ್ಮೆ ನಾನು ಧನ ಉಳ್ಳವನೆಂದು ಮೆರೆದಾಡಿದರೆ, ಅದನ್ನು ವ್ಯಯ ಮಾಡಲು ಸಾಕಷ್ಟು ಜನ ವಂಚಕರು, ಹೊಗಳುಬಟ್ಟರೆಲ್ಲ ಸೇರಿ ಧನಿಕನ ಮನವನ್ನು ಯಾವರೀತಿಯಿಂದಲಾದರೂ ಕೆಡಿಸಿ ಎಲ್ಲ ಹಾಳುಗೆಡವಿ ದುಸ್ಥಿತಿಗೆ ತಂದುಬಿಡುತ್ತಾರೆ.
   ಆದ್ದರಿಂದ ಧನ ಬಂದಾಗ ಒಣ ದಿಮಾಕಿನತ್ತ ಹೊಗದೆ ಸದುಪಯೊಗ ಪಡಿಸಿಕೊಳ್ಳುತ್ತ ಸಾಮಾನ್ಯರಲ್ಲಿ ಸಾಮಾನ್ಯರಂತೆ ನೆಮ್ಮದಿಯಿಂದ ಬದುಕುವುದು ಮುಖ್ಯವಾಗಿರುತ್ತದೆ.

2.


ಬಲ್ಲಿದವರ ವೈಜ್ಞಾನಿಕ ಸಾರ
ಮೌಢ್ಯಕಿಲ್ಲಾವುದೇ ಕಾರುಭಾರ,
ಮೂರ್ಖನ ಮೂಢನಂಬಿಕೆ ಜಾಡು
ಬಲ್ಲ ವಂಚಕರ ರಹದಾರೀ ಬೀಡು!
                                                  - ಎಮ್ಮೆಚ್ಚೆ

ವಿಸ್ತೃತ
    ವಿಧ್ಯಾವಂತರಾದವರು ವೈಜ್ಞಾನಿಕ ತಳಹದಿಯ ಮೇಲೆ ಎಲ್ಲವನ್ನು ವಿಶ್ಲೇಶಿಸಿ ಸತ್ಯವನ್ನು ವಸ್ತುನಿಷ್ಟವಾಗಿ ಕಂಡುಕೊಳ್ಳುತ್ತಾರೆ. ಯಾವುದೇ ಕಾಲ್ಪನಿಕತೆಗೆ ಬೆಲೆ ಕೊಡುವದಿಲ್ಲ. ವೈಜ್ಞಾನಿಕತೆ ಮೌಡ್ಯತೆಯನ್ನು ಕಡೆಗಣಿಸಿ ಸತ್ಯತೆಯ ಹತ್ತಿರ ನಮ್ಮನ್ನು ನೂಕುತ್ತದೆ. ಮೌಢ್ಯತನದ ಕುತೂಹಲಗಳನ್ನು ಕಳೆದುಬಿಡುತ್ತದೆ. ಮೂಢತನ ನಮ್ಮನ್ನು ಮೂಢ ನಂಬಿಕೆಗಳತ್ತಲೇ ಸೆಳೆಯುತ್ತದೆ. ವಿಜ್ಞಾನ ಬೆಳೆದಂತೆ ಮೂಢನಂಬಿಕೆಗಳು ಅಳಿಸುತ್ತ ಹೋಗುತ್ತವೆ. ಉದಾಹರಣೆಗೆ, ಭೂಮಿ ಗುಂಡಗಾಗಿದ್ದು ಸೂರ್ಯ ಹಾಗೂ ಇತರೆ ಗ್ರಹಗಳು ಅದರ ಸುತ್ತ ಪರಿಭ್ರಮಿಸುತ್ತವೆ, ಚಂದಿರ ಸ್ವ ಪ್ರಜ್ವಲಿಸುತ್ತಾನೆ ಹೀಗೆ ಎಷ್ಟೋ ವಿಷಯಗಳನ್ನು ಸಾವಿರಾರು ವರ್ಷಗಳಿಂದ ಇದ್ದ ಮೂಢನಂಬಿಕೆಯನ್ನು ವಿಜ್ಞಾನ ಅಲ್ಲಗಳೆದು ಸತ್ಯ ಬಿಚ್ಚಿಟ್ಟಿತು. ಅದರಂತೆ ಸ್ರೃಷ್ಠಯ ಪ್ರತಿಯೊಂದು ಕುತೂಹಲಗಳನ್ನು ವಿಜ್ಞಾನ  ಸತ್ಯತೆಯನ್ನು ಹಂತಹಂತವಾಗಿ ಅಲ್ಲಗಳೆಯುತ್ತ ವಸ್ತುನಿಷ್ಠತೆಯನ್ನು  ನಿರೂಪಿಸುತ್ತ ಹೊಗುತ್ತಿದೆ. ಎಲ್ಲಿ ವಿಜ್ಞಾನವಿರುತ್ತದೆಯೋ ಅಲ್ಲಿ ಮೂಢತನಗಳು ಮಾಯವಾಗಿ ಬಿಡುತ್ತವೆ. ಇಲ್ಲ ಸಲ್ಲದ್ದು ಹೇಳಿ ವಂಚಿಸುವಂತಹ ವ್ಯಕ್ತಿಗಳೂ ಮಾಯವಾಗಿ ಬಿಡುತ್ತಾರೆ. ಸತ್ಯ ತಿಳಿದವರನ್ನು ಯಾರೂ ಅಷ್ಟು ಸುಲಭವಾಗಿ ಮೊಸಗೊಳಿಸುವದು ಸಾಧ್ಯವಾಗುವದಿಲ್ಲ.
   ಈ ವೈಜ್ಞಾನಿಕತೆಯನ್ನು ತಿಳಿದುಕೊಳ್ಳಲಾರದ ವ್ಯಕ್ತಿ ಪರರಿಂದ ಬಹು ಬೆಗ ವಂಚಿಸಲ್ಪಡುತ್ತಾನೆ. ವಂಚಕರನ್ನು ಆಲ್ಲಗಳೆಯುವ ಮಾನಸಿಕ ಸ್ಥಿತಿ ಮೂಢರಿಗೆ ಇರುವುದೇ ಇಲ್ಲ. ಇಂಥವರು ತಮ್ಮ ತನಗಳನ್ನೇ ಕಳೆದುಕೊಂಡು, ವಂಚಕರು ಹೇಳಿದ್ದೇ ಮಹಾ ಸತ್ಯವೆಂದು ತಿಳಿದುಬಿಟ್ಟಿರುತ್ತಾರೆ. ವಂಚಕರು ಇಂಥ ಮೂಢರನ್ನೇ ಗುರಿಯಾಗಿಸಿಕೊಂಡು  ಲಾಭ ಮಾಡಿಕೊಳ್ಳುತ್ತಾರೆ. ಯಾಕೆಂದರೆ ತಿಳುವಳಿಕೆ ಇಲ್ಲದವರೇ ಸುಲಭವಾಗಿ ಬಲಿಯಾಗುತ್ತಾರೆಂದು ವಂಚಕರಿಗೆ ತಿಳಿದಿರುತ್ತದೆ.
 ಆದ್ದರಿಂದ ನಾವು ತಿಳುವಳಿಕೆಯ ಜೊತೆಗೆ ವೈಜ್ಞಾನಿಕ ತಳಹದಿಯ ಮೇಲೆ ವಸ್ತುನಿಷ್ಠವಾಗಿ ಬದುಕಲು ಕಲಿಯಬೇಕು. ಹಾಗಾದಾಗ ಮಾತ್ರ ನಾವು ಪರರಿಂದ ಮೋಸಗೊಳ್ಳುವದು ತಪ್ಪುತ್ತದೆ.
   ಇತ್ತಿತ್ತಲಾಗಿ ವಿಧ್ಯಾವಂತರೇ ಹೆಚ್ಚು ಮೂಢನಂಬಿಕೆಗಳತ್ತ ವಾಲುತ್ತಿರುವದು ಕುತೂಹಲಕರ ಸಂಗತಿಯಾಗಿದೆ. ವಿಧ್ಯಾವಂತರೇ ಹೆಚ್ಚು ಮನೋವ್ಯಾದಿಗಳಿಗೆ ಬಲಿಯಾಗುತ್ತಿರುವದು ಇನ್ನೂ ಆಶ್ಚರ್ಯ ಉಂಟು ಮಾಡುತ್ತದೆ.

Comments

Popular Posts