1.
ತಾಳಲಾರದೆ ಗುಣಗಡಗಿಯಲಿ ನಡುಕ
ಸಂಗಣಲಿಂಗ ಸೇರಿದ ಭರ್ಜರಿ ಸಂದೂಕ,
ಯಾಕೆ ಗುರುವೆ ಹೆದರಿದೆಯಾ ಜನಕೆ
ಭವ ಭಕ್ತಿ ಬತ್ತಿಹೋದವರ ಮನಕೆ !
                                                      - ಎಮ್ಮೆಚ್ಚೆ
   
ವಿಸ್ತ್ರೃತ
 ಹಿಂದೆ ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ಲಿಂಗಾಯತ ಧರ್ಮ ಉಛ್ರಾಯ ಸ್ಥಿತಿಯಲ್ಲಿತ್ತು. ಜನಸಾಮಾನ್ಯರಿಗೆ ಹಾಗೂ ಜಾತಿ ಬಹೀಸ್ಕ್ರೃತರಿಗೆ ಈ ಲಿಂಗಾಯತ ಧರ್ಮ ಜೀವನದ ನೆಮ್ಮದಿಗೆ ಆಶಾಕಿರಣವಾಯಿತು. ಲಿಂಗಾಯತ ಧರ್ಮಕ್ಕೆ ಸೇರಲು ಮತ್ತು ಅನುಸರಿಸಲು ಜನರಿಗೆ ಸುಲಭ ರೀತಿಯದ್ದಾಗಿದ್ದು ಎಲ್ಲಾ ಜಾತಿಯ ಜನರಿಗೆ ಮುಕ್ತ ಸಮಾನ ಅವಕಾಶಗಳಿದ್ದುದರಿಂದ ಬಹಳ ಬೇಗ ಈ ಧರ್ಮ ವಿಶ್ವದಾದ್ಯಂತ ಹರಡಿತು. ಬಸವಣ್ಣನವರ ಗತಕಾಲದ ನಂತರ ಲಿಂಗಾಯತ ಧರ್ಮ ತನ್ನಷ್ಟಕ್ಕೆ ತಾನೆ ನಿಧಾನವಾಗಿ ಸಾಗುತ್ತಿದೆ. ಬಸವತ್ವದ ರೀತಿ ನೀತಿಗಳು ಜನರಲ್ಲಿ ನಶಿಸಿ ಹೋಗುತ್ತಿವೆ. ವಿಭೂತಿ ಧಾರಣೆ, ಲಿಂಗಧಾರಣೆ ಹೀಗೆ ಎಲ್ಲ ನಿಯಮಗಳು ನಶಿಸುತ್ತಿವೆ. ಕೊರಳಿಗೆ ಹಾಕಿಕೊಳ್ಳುವ ಲಿಂಗ ಉಳ್ಳ ಗುಣಗಡಗಿ(ಕರಂಡಿಗೆ, ಚೌಕ) ಮರೆತೇ ಹೋಗಿವೆ. ಬಡವರಿಗಾಗಿಯೇ ಇದ್ದ ಕಂತಿಯ ಲಿಂಗು(ಗುದ್ದಿ)ಗಳ ನೆನಪುಗಳೂ ಮಾಸಿವೆ. ವಿಭೂತಿ ಜಾಗದಲ್ಲಿ ಬಣ್ಣಬಣ್ಣದ ನಾಮಗಳು ರಾರಾಜಿಸುತ್ತಿವೆ. ಬಸವ ಧರ್ಮ ಪ್ರಪಂಚದಾದ್ಯಂತ ಜನಮಾನ್ಯತೆಯನ್ನು ಪಡೆದು ಅನೇಕ ವಿದೇಶೀಯರೂ ಸಹ ಧರ್ಮ ಸ್ವೀಕಾರಕ್ಕೆ ಮುಂದಾಗುತ್ತಿರುವುದು ಬಸವ ತತ್ವಗಳ ಹಿರಿಮೆ. ಇಷ್ಟೆಲ್ಲ ಸಂಪೂರ್ಣ ಅಡಿಪಾಯವನ್ನು ಅಣ್ಣನವರು ಹಾಕಿಹೋಗಿರುತ್ತಾರೆ. ಅವರ ನಿರ್ಗಮನದ ನಂತರ ನಾವುಗಳು ಅದರ ಮುಂದಿನ ಹಂತ ಸಾಧಿಸುವಿಕೆಯ ಪ್ರಯತ್ನವಲ್ಲ ಇದ್ದ ಅಡಿಪಾಯವನ್ನೂ ಸಡಿಲಿಸಲು  ಮೂರ್ಖತನದಿಂದ ಒಂದೊಂದು ರೀತಿಯಾಗಿ ಪ್ರಯತ್ನ ಪಡುತ್ತಿದ್ದೇವೆ. ಎಲ್ಲರಿಗೂ ದೂರದ ಬೆಟ್ಟಗಳು ಚನ್ನಾಗಿಯೇ ಕಾಣುತ್ತವೆ. ಪ್ರತ್ಯಕ್ಷ ಅನುಭವ ಆದಾಗ ಮಾತ್ರ ಅಲ್ಲಿಯ ನಿಜ ಸ್ಥಿತಿ ತೊಂದರೆದಾಯಕವೆಂದು ಅರ್ಥವಾಗುತ್ತದೆ.
 ಇದರ ಧರ್ಮ ಪ್ರಚಾರಕ್ಕಾಗಿ ಸಾಕಷ್ಟು ಜನ ಸತ್ಪುರುಷರುಗಳಿದ್ದಾರೆ. ಆದರೆ ಜನರ ಮನಸನ್ನು ನಿಯಂತ್ರಿಸಿ ತಿದ್ದಿತೀಡಲು ಯಾವ ಅಂಕುಶಗಳೂ ಇಲ್ಲದ್ದಕ್ಕೇ ಧರ್ಮಕ್ಕೆ ಹಿನ್ನಡೆಯಾಗಿರಬಹುದೇನೋ. ಹಾಳಾಗುವ ಮುನ್ನ ಜನರು ಎಚ್ಚೆತ್ತುಕೊಳ್ಳಬೇಕು.
‌ ತಿಳುವಳಿಕೆ ಉಳ್ಳವರು ಯಾವ ರಾಗ ದ್ವೇಶಗಳಿಗೆ ಒಳಗಾಗದೆ ಬಸವ ಧರ್ಮವನ್ನು ಹಾಗೂ ಅದರ ತಿರುಳನ್ನು ಜನರಿಗೆ ತಿಳಿಸಿ ತಾವೂ ಆಚರಿಸುವ ಸಂಕಲ್ಪವಾಗಬೇಕು. ಮಠಮಾನ್ಯಗಳು ಆರ್ಥಿಕಾಭಿವ್ರೃಧ್ಧಿಯ ಪರವಾಗಿರದೆ ಸಾಮಾನ್ಯ ಜನರ ನೈಜ ಅಭಿವ್ರೃದ್ಧಿಗೆ ಪ್ರಯತ್ನ ಪಡುವಂತೆ ಇರಬೇಕು.ಸರಕಾರಗಳು ಸಾಕಷ್ಟು ಸವಲತ್ತುಗಳನ್ನು ಒದಗಿಸಬೇಕು. ಅಂದರೆ ಮಾತ್ರ ಜನಸಾಮಾನ್ಯರ ಬದುಕು ಹಸನಾಗುತ್ತದೆ.

2.
ಮನಸಲಿ ಹೊಕ್ಕ ಮೋಹದ ತೊರೆ
  ನಾಯಿಗೆ ಹಾಕಿದ ರೋಗದ ಬರೆ,
  ಮಾನವುಳ್ಳ ಮಾನವ ಪ್ರಾಣಿ ನೋಂದ
ಮಾನಗೇಡಿಗಳಿಗಿಲ್ಲ ಯಾವುದೇ ಸಂಬಂಧ!
                                                                   - ಎಮ್ಮೆಚ್ಚೆ

ವಿಸ್ತ್ರೃತ
  ಯಾವುದೇ ವಿಷಯಾಸಕ್ತ ಭಾವನೆ ಮನಸಿನೊಳಗೆ ಸೇರಿಕೊಂಡಿತೆಂದರೆ ನೆರವೇರುವ ವರೆಗೆ ಮನಸನ್ನು ಕೊರೆಯುತ್ತಲೇ ಇರುತ್ತದೆ. ಅದರಲ್ಲೂ ಕಾಮಾಸಕ್ತಿಯ ಭಾವನೆಗಳು ಮನಸಿನಲ್ಲಿ ಸೇರಿಕೊಂಡರಂತೂ ಮುಗಿದೇ ಹೋಯಿತು. ಮನಸನ್ನು ಕೆರಳಿಸಿ ಜಗತ್ತಿನಲ್ಲಿ ಇದರ ವಿನಹ ಬೇರೆ ಏನಿಲ್ಲ ಅನ್ನುವಷ್ಟು ಅಂಧತನಕ್ಕೆ ಒಳಪಡಿಸಿ ಮಾನ, ಮರ್ಯಾದೆ ಕಳೆದುಕೊಳ್ಳುವಂತೆ ಮಾಡಿಬಿಡುತ್ತದೆ. ಜನರ ಮಧ್ಯ ಅಪಹಾಸ್ಯಕ್ಕೆ ಒಳಪಟ್ಟರೂ ಲಜ್ಜೆತನದಿಂದ ಅಂಥವರಿಗೆ  ತಿಳಿಯುವುದೇ ಇಲ್ಲ. ಇಂಥವರು ಸಮಾಜದ ಜನರೆದುರು ಕ್ಷುಲ್ಲಕರಾಗಿರುತ್ತಾರೆ. ಇಂಥಹವರಿಂದ ಜನರು  ದೂರವಿರಲು ಬಯಸುತ್ತಾರೆ. ಇಂತಹ ಮೋಹಿತ ಗುಣವು, ಸಾಕುನಾಯಿಗಳಿಗೆ ರೋಗ ಬರದಿರಲೆಂಬ ಮೂಢನಂಬಿಕೆಯಿಂದ ಕೆಲ ಜನರು ಬರೆ ಹಾಕುವಂತಹದ್ದಾಗಿರುತ್ತದೆ. ಈ ರೀತಿಯಾಗಿ ಹಾಕಿದಂತಹ ಬರೆಯ ಕಲೆಯು ಜೀವಂತವಾಗಿ ಇರುವವರೆಗೂ ಇರುತ್ತದೆ. ಯಾವುದೇ ಕಾರಣಕ್ಕೂ ಮಾಸಿಹೋಗುವದಿಲ್ಲ. ಗುಣ ಸ್ವಭಾವಗಳ  ಗುರುತಾಗಿ ಉಳಿದುಬಿಡುತ್ತದೆ.
 ಎಲ್ಲವೂ ಯಾರೂ ಅಂದುಕೊಂಡಂತೆ ನಿಖರವಾಗಿ ಘಟಿಸುವದಿಲ್ಲವಾದರೂ ಸಹ ನಮ್ಮ ನಮ್ಮ ನಿರಾಶದಾಯಕ ತುಮುಲಗಳನ್ನು ಒಳ್ಳೆಯ ಜಾನ್ಮೆಯಿಂದ ನಿಗ್ರಹಿಸಿಕೊಳ್ಳುವುದು ಮುಖ್ಯವಾದುದು. ತಮ್ಮ ಮೋಹಿತತೆ ಅಂಕಿತದಲ್ಲಿಡಲು ಸಾಕಷ್ಟು ಜನರು  ಮನೋನಿಗ್ರಹತನದಿಂದ ಜೀವಿಸುತ್ತಾರೆ. ಮನ ನೊಂದಾದರೂ ಸರಿಯಾಗಿ ಬದುಕಿ ತೋರಿಸುತ್ತಾರೆ. ಕೆಲಜನರಿಗೆ ಜೀವನದಲ್ಲಿ ಸೂಕ್ಮತೆಗಳು ಅರ್ಥವಾಗದೆ ಕಾಮಾಂಧರಾಗುತ್ತಾರೆ. ಋಣ, ಸಂಬಂಧಗಳನ್ನು ಮರೆತವರಾಗಿರುತ್ತಾರೆ. ವಿಕ್ರೃತಕಾಮಿಗಳಾಗಿ ಸಮಾಜ ಕಂಟಕರಾಗುತ್ತಾರೆ.
 ಆದ್ದರಿಂದ ಕೌಟುಂಬಿಕ ವ್ಯಕ್ತಿಗಳಿಗೆ ರಾಗ ರಸಾದಿಗಳು ಸ್ವಾಭಾವಿಕವಾದವುಗಳಾದರೂ ಸಹ ಮನಬಂದಂತೆ ಹರಿಬಿಡದೆ ಅಂಕಿತದಲ್ಲಿಟ್ಟಕೊಂಡು ಅವರವರ ಘಣತೆ, ಗೌರವಗಳನ್ನು ಹೆಚ್ಚಿಸಿಕೊಳ್ಳುವದು ಒಳ್ಳೆಯದು. ಎಲ್ಲ ಪ್ರಾಣಿಗಳಿಗಿಂತ ತಿಳುವಳಿಕೆಯುಳ್ಳ ನಾವುಗಳು ಸಾಮಾಜಿಕವಾಗಿ ಜವಾಬ್ದಾರಿಯಿಂದ ಬದುಕುವದು ಅತಿ ಮುಖ್ಯವಾಗಿರುತ್ತದೆ.

Comments

Popular Posts