1.

 ದಾನ ನೀಡುವುದು ಧರ್ಮದ ದೊಡ್ಡ ನಿಲುವು,
ಸತ್ಪಾತ್ರರ ಸಲ್ಲಿಕೆಯ ದಾನ ಬಲ್ಲಿದನ ತಿಳಿಮನವು,
ದೊಡ್ಡ ಪಿಡುಗದು ಸಮಾಜಕ್ಕೆ ಬಿಕ್ಷೆ ಬೇಡುವುದು
 ನಿರಾಕರಿಸಿದರೆ ದಾನಿತ  ದಾನವೇ ಓಡುವುದು!
                                                                        - ಎಮ್ಮೆಚ್ಚೆ

ವಿಸ್ತೃತ
    ಧರ್ಮ ಶಾಸ್ತ್ರಗಳಂತೆ ತಾನು ಗಳಿಸಿದ ಭಾಗವನ್ನು ಸಮಾಜಕ್ಕೇ ದಾನ ಮಾಡುವುದರಿಂದ ಪುಣ್ಯದ ಫಲ ಸಿಗುತ್ತದೆ. ಇಂತಹ ಪುಣ್ಯ ಫಲದಿಂದಾಗಿಯೇ ಸ್ವರ್ಗಕ್ಕೆ ಹೋಗುತ್ತಾರೆ. ದಾನ ಮಾಡುವದನ್ನು ಬಹುಷ್ಯ ಜಗತ್ತಿನ ಎಲ್ಲ ಧರ್ಮಗಳೂ ಪ್ರಭಲವಾಗಿ ಪ್ರತಿಪಾದಿಸುತ್ತವೆ. ಕೊಡುವುದು ದಾನವಾದರೆ ಬೇಡುವುದು ಬಿಕ್ಷೆ ಅನ್ನಿಸಿಕೊಳ್ಳುತ್ತದೆ. ‌
    ದಾನ ಮಾಡುವುದನ್ನು ಎಲ್ಲಧರ್ಮಗಳೂ ಒಪ್ಪಿಕೊಂಡಿದ್ದರೂ ಸಹ ದಾನವನ್ನು ಪಡೆದುಕೊಳ್ಳಲು ಯೋಗ್ಯ ಅವಶ್ಯಕತೆ ಉಳ್ಳವರಿಗೆ ಮಾತ್ರ ಕೊಡಬೇಕು, ದಾನ ದುರುಪಯೋಗ ಆಗಬಾರದು ಎನ್ನುವುದು ವಿಚಾರವಂತರ ಉದ್ದೇಶವಾಗಿರುತ್ತದೆ. ದೊಡ್ಡ ದೊಡ್ಡ ನಗರಗಳಲ್ಲಿ ಬಿಕ್ಷಾಟನೆಗಾಗಿ ಮಾಫಿಯಾಗಳಿವೆಯಂತೆ. ಇಂಥಹ ಜಾಲದವರು ಅಮಾಯಕ ಮಹಿಳೆ, ಬಾಲಕರನ್ನು ಹೆಚ್ಚಾಗಿ ಅಪಹರಿಸಿ ಅಂಗ ಹೀನರನ್ನಾಗಿಸಿ ಸಾಮಾಜಿಕ ಪ್ರಮುಖ ಜಾಗೆಗಳಲ್ಲಿ ಬಿಕ್ಷೆಬೇಡಲು ಹಚ್ಚಿ ಬಂದ ಹಣ ಕಿತ್ತುಕೊಳ್ಳುತ್ತಾರೆ. ಕೆಲವರು ಎಲ್ಲಾ ಚನ್ನಾಗಿದ್ದರೂ ವೇಷ ಮರೆಸಿ ನಾಟಕ ಮಾಡುತ್ತ  ಬಿಕ್ಷೆಯನ್ನು ಲಾಭದಾಯಕ ಉದ್ಯೋಗ ಮಾಡಿಕೊಂಡಿದ್ದಾರೆ.
    ನಮ್ಮ ಕಾನೂನು ಭಿಕ್ಷಾಟನೆಯನ್ನ ಅಪರಾಧವನ್ನಾಗಿಸಿದೆ. ಆದರೂ ಸಮಾಜ ಇದರಿಂದ ಮುಕ್ತವಾಗಿಲ್ಲ. ಆದರೆ ದಾನ ಕೊಡುವದನ್ನು ಹಿಂದೂ ಕಾನೂನು ಮಾನ್ಯತೆ ಮಾಡಿರುತ್ತದೆ. ಕಾನೂನಿಗೊಳಪಟ್ಟು ಯಾವುದೇ ಹಿಂದುಗಳು ಸಹ ದಾನವನ್ನು ಮಾಡಬೇಕಾಗಿರುತ್ತದೆ. ಆದರೆ ಕೊಡಲ್ಪಡುವ ದಾನವನ್ನು ದಾನಿತ(ದಾನ ಪಡೆದುಕೊಳ್ಳುವವ ಎಂದು ಹೇಳಲಾಗುವ ವ್ಯಕ್ತಿಗಳು) ನಿರಾಕರಿಸಿದಲ್ಲಿ ದಾನದ ವ್ಯವಹಾರ ಕಾನೂನಿನಂತೆ ಸಂಪೂರ್ಣವಲ್ಲ.
    ಆದ್ದರಿಂದ ಅನಾವಶ್ಯಕವಾಗಿ ಬೇಕಾ ಬಿಟ್ಟಿ ದಾನ ಮಾಡಿ ಜನರನ್ನು ದರಿದ್ರರನ್ನಾಗಿಸದೆ, ತಾವೂ ಪ್ರಚಾರ ಪ್ರೀಯರಾಗದೆ ಯೋಗ್ಯ ಅವಶ್ಯಕತೆ ಇದ್ದವರಿಗೆ ದಾನ ಮಾಡಬೇಕು. ಅದರಂತೆ ಜನರೂ ಸಹ ಇನ್ನೊಬ್ಬರ ಹಂಗಿನಲ್ಲಿ ಬದುಕಬಾರದು ಎನ್ನುವ ಸ್ವಾಭಿಮಾನವನ್ನು ಬೆಳಸಿಕೊಂಡದ್ದೇ ಆದಲ್ಲಿ ಸಮಾಜ ಪ್ರಗತಿಯತ್ತ ಸಾಗುವದು ಶತಸಿದ್ದ.

2.

ಕಲಾವಿದರ ಕಲೆಯದು ಸತ್ಯ
ಬೆಳಗುತ್ತಲೇ ಇರಬೇಕು ನಿತ್ಯ,
ಎಂದೂ ಯೋಗ್ಯತೆಗಿರದ  ಅಂದ
ಅದು ಸುಂದರ ವೇಶ್ಯೆಯರ ಚಂದ!
                                                  - ಎಮ್ಮೆಚ್ಚೆ

ವಿಸ್ತೃತ
    ಯಾವುದೇ ತರಹದ ಕಲಾವಿದರಿರಲಿ ತಾವು ಕಲಿತ ಕಲಾ ವಿದ್ಯೆಯನ್ನು ಮೇಲಿಂದ ಮೇಲೆ ಉಪಯೋಗಿಸುತ್ತಲೇ ಇರಬೇಕು. ಅದನ್ನು ರೂಡಿಯಾಗಿಸಿಕೊಳ್ಳಬೇಕು. ಇಲ್ಲದಿದ್ದ ಪಕ್ಷದಲ್ಲಿ ಅದು ನಶಿಸುತ್ತ ತನ್ನ ಸತ್ವವನ್ನು ಕಳೆದುಕೊಳ್ಳುತ್ತ  ಹೋಗುತ್ತದೆ. ಯಾವುದೇ ಪರಿಣಾಮಕಾರಿತನ ಬೀರದೆ ಹೋಗುತ್ತದೆ. ಕಲಾ ದೇವಿಯನ್ನು ಒಲಿಸಿಕೊಳ್ಳಲು ಅವಳೊಂದಿಗೆ ಅನುಸಂಧಾನ ಗೊಳ್ಳಬೇಕು ಹಾಗೂ ಆರಾದಿಸಬೇಕು ಅಂದರೆ ಮಾತ್ರ ಅದು ತನ್ನ ಬೆಳಕನ್ನು ತೋರುತ್ತದೆ. ಕಲೆಗಳು ಮಾನವ ಜೀವನದ ಜೀವರಸಗಳು, ಅವು ಮಾನವರ ನರನಾಡಿ‌ಗಳು. ಕಲೆಗಳು ಅಮೂಲ್ಯ ಸಾಧನೆಗಳು. ಅವು ತಲೆಮಾರಿನಿಂದ ತಲೆಮಾರಿಗೆ ಸಂಚರಿಸುವ ಸಂಜೀವಿನಿ. ಆದ್ದರಿಂದ ತುಂಬು ಸಂಸ್ಕೃತಿ ಹೊಂದಿದ ಕಲೆಗಳನ್ನು ಪ್ರಯತ್ನ ಪೂರಕವಾಗಿ ಉಳಿಸಿ ಬೆಳಸಿಕೊಂಡು ಹೋಗುವುದು ಎಲ್ಲರ ಹೊನಣೆಗಾರಿಕೆಯೂ  ಹೌದು.
    ಕೆಲಜನರು ತಮ್ಮ ನೈಜತೆಗಿಂತ ಆಕರ್ಷಕವಾಗಿ ಕಾಣಬೇಕೆಂಬ ಉದ್ದೇಶದಿಂದ ಆರೋಗ್ಯಕ್ಕೆ ಹಾನಿಕಾರಕ ಆಗುವಂತಹ  ರಾಸಾಯನಿಕಯುಕ್ತ ಸೌಂದರ್ಯ ವರ್ಧಕ ಸಾಧನಗಳನ್ನು ಹೆಚ್ಚು ಬಳಸುತ್ತ ಚನ್ನಾಗಿ ಕಾಣುವುದರೊಂದಿಗೆ ತಮ್ಮ ದೈಹಿಕ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಆರೋಗ್ಯಕ್ಕೆ ಹಾಣಿಕರವಾಗಿದ್ದರೂ ಭ್ರಮೆಗೆ ಒಳಪಟ್ಟು ಇದ್ದ ಮೈಕಾಂತಿ ನಶಿಸುವಂತೆ ಮಾಡುತ್ತಾರೆ.
    ‌ಬಾಹ್ಯ ರೂಪ ಅನ್ನುವುದು ನಾವುಗಳು ನಿರ್ಮಿಸಿಕೊಂಡ ಕ್ರಿಯೆಯಲ್ಲ. ಅದು ಹುಟ್ಟಿದಾರಭ್ಯ ನಮ್ಮೊಂದಿಗಿರುವ ಹಿರಿಯರ ಬಳುವಳಿಗಳು. ಅವುಗಳನ್ನು ಅಲ್ಲಗಳೆಯಲಾಗುವದಿಲ್ಲ. ನಮ್ಮ ನೈಜ ನೂನ್ಯತೆಗಳೊಂದಿಗೆ ನಾವು ಬದುಕಬೇಕು. ಬಾಹ್ಯ ಸುಂದರತೆ  ಬೇಕು ನಿಜ. ಅದು ಕೃತಕತೆಯಲ್ಲಿ ಮುಳುಗಿರಬಾರದು. ಅದೇ ಜೀವಾಳವಲ್ಲ, ಲಾಭದಾಯಕವೂ ಅಲ್ಲ. ಬಾಹ್ಯ ಕ್ರೃತಕ ಸುಂದರತೆ ಜೀವನದ ಮಾನದಂಡವಾದ ವೇಶ್ಯೆಯರಿಗೆ ಮಾತ್ರ ತಕ್ಕುದು ಆಗಿರುತ್ತದೆ. ಅದು ವಿಟಪುರುಷರ ಆಕರ್ಷನೆಯ ಸಾಧನವಾಗಿರುತ್ತದೆ. ಆಂತರಿಕ ಸುಂದರತೆ ಎಲ್ಲಕ್ಕೂ ಮಿಗಿಲು. ಆದ್ದರಿಂದ ಬಾಹ್ಯ ಆಡಂಬರಕ್ಕೆ ಹೆಚ್ಚು ತಲೆಕೆಡಿಸಿಕೊಂಡು ಕೊರಗುವ ಬದಲು ಮನಸನ್ನು ಶುದ್ಧವಾಗಿ ಇಟ್ಟುಕೊಂಡು ದೈಹಿಕ ಶ್ರಮ ಪಡುತ್ತ ಪೌಷ್ಠಿಕ ಆಹಾರ ಸೇವಿಸುತ್ತ ಹೋಗುವದು ದೇಹ ಕಾಂತಿಯುಕ್ತವಾಗಿ ಸುಂದರಕಾಣಲು ಸರಿಯಾದ ಮಾರ್ಗವಾಗಿರುತ್ತದೆ.

Comments

Popular Posts